ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಆರೋಪಿಗೆ ಕಾರವಾರದ ಚಿತ್ತಾಕುಲ ಪಿಎಸ್ಐ ಮಹಾಂತೇಶ ವಾಲ್ಮಿಕಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ತಮ್ಮ ವಾಟ್ಸಪ್ ಸ್ಟೇಟಸ್ಸಿನಲ್ಲಿ `Happy Birthday Anna’ ಎಂದು ಬರೆದು ಆರೋಪಿ ಫೋಟೋ ಹಂಚಿಕೊoಡಿದ್ದಾರೆ!
ಈ ಪೊಲೀಸ್ ಅಧಿಕಾರಿ ಮಾಡುವ ತಪ್ಪುಗಳನ್ನು ಹುಡುಕುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆಯವರಿಗೆ (ಪ್ರವೀಣ ಶೆಟ್ಟಿ ಬಣ) ಈ ವಿಷಯ ಗೊತ್ತಾಗಿದೆ. ದಾಖಲೆಗಳ ಜೊತೆ ಅವರು ಇದೀಗ ಸರ್ಕಾರಕ್ಕೆ ದೂರು ನೀಡಿದ್ದಾರೆ. `ಪಿಎಸ್ಐ ಮಹಾಂತೇಶ ವಾಲ್ಮಿಕಿ ಅವರು ಅನೇಕ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ’ ಎಂದು ರಕ್ಷಣಾ ವೇದಿಕೆಯವರು ಈ ಹಿಂದೆ ಸಹ ದೂರಿದ್ದರು. ಅದಕ್ಕೆ ಸಾಕ್ಷಿಯಾಗಿ ಕೆಲ ದಾಖಲೆಗಳನ್ನು ಮೇಲಧಿಕಾರಿಗಳಿಗೆ ನೀಡಿದ್ದರು. ಇದೀಗ ಆರೋಪಿಯೊಬ್ಬರಿಗೆ ಪೊಲೀಸ್ ಅಧಿಕಾರಿ ಶುಭಾಶಯ ಕೋರಿದ ದಾಖಲೆಯನ್ನು ತೆರೆದಿಟ್ಟಿದ್ದಾರೆ.
ಮೇಲಧಿಕಾರಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಗೋವಾದಿಂದ ಮದ್ಯ ತರಿಸಿದ್ದು, ಅಕ್ರಮ ಮರಳು ಸಾಗಾಟ ವಾಹನಗಳಿಗೆ ಅವಕಾಶ ಮಾಡಿಕೊಟ್ಟಿದ್ದು ಸೇರಿ ಹಲವು ಆರೋಪಗಳನ್ನು ರಕ್ಷಣಾ ವೇದಿಕೆಯವರು ಪಿಎಸ್ಐ ಮೇಲೆ ಹೋರಿಸಿದ್ದಾರೆ. ಸಂಘಟನೆ ಜಿಲ್ಲಾಧ್ಯಕ್ಷ ಅಕ್ಷಯ ನಾಗೇಕರ್ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ. ಈ ವೇಳೆ ಪಿಎಸ್ಐ ಮಹಾಂತೇಶ ವಾಲ್ಮೀಕಿ ಅವರು ಸಾರ್ವಜನಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದಾಗಿಯೂ ದೂರಿದ್ದಾರೆ.
`ಈ ಎಲ್ಲಾ ವಿಷಯಗಳ ಬಗ್ಗೆ ದಾಖಲೆಗಳ ಜೊತೆ ದೂರು ನೀಡಲಾಗಿದೆ. ಹೀಗಾಗಿ ಮಹಾಂತೇಶ ವಾಲ್ಮೀಕಿ ಅವರನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಅಕ್ಷಯ್ ಆಗ್ರಹಿಸಿದರು. ಹಳೆಯ ಪ್ರಕರಣಗಳ ಬಗ್ಗೆ ಮರು ಮಾತನಾಡಿದ ಅವರು ಪಿಎಸ್ಐ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು. ಸೂಕ್ತ ಕ್ರಮ ಆಗದೇ ಇದ್ದರೆ ಇನ್ನಷ್ಟು ಹೋರಾಟ ನಡೆಸುವುದಾಗಿ ಸಂಘಟನೆಯ ಮಹೇಶ ಬಾಂದೇಕರ್, ಬ್ರಿಜೇಶ ನಾಯ್ಕ, ಲೋಕೇಶ ನಾಯ್ಕ ಎಚ್ಚರಿಸಿದರು.
