ದಾಂಡೇಲಿ :
ಉತ್ತರ ಕನ್ನಡ ಜಿಲ್ಲೆಯ 25 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆಯಲಿದೆ ಎಂದು ನ್ಯಾಯವಾದಿ ಕೆ.ಎಚ್.ಪಾಟೀಲ್ ಮತ್ತು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಅವರು ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಹಳೆ ನಗರಸಭೆಯ ಮೈದಾನದಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದರು.
ಮೊದಲು ಮಾತನಾಡಿದ ನ್ಯಾಯವಾದಿ ಕೆ.ಎಚ್.ಪಾಟೀಲ್ ಅವರು ಸ್ಥಳೀಯರಾದ ಅಕ್ರಂ ಖಾನ್ ಎಂಬವರು ರಾಜ್ಯ ಪರಿಷತ್ತಿನ ಅನುಮತಿ ಪತ್ರ ಪಡೆಯದಿರುವ ಹಾಗೂ ಇನ್ನಿತರ ಕಾರಣಗಳನ್ನು ನೀಡಿ ಡಿ.10 ರಂದು ನಗರದ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದಾಖಲು ಮಾಡಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬಾರದು ಮತ್ತು ತಡೆಯಾಜ್ಞೆ ಕೋರಿ ಪ್ರಕರಣವನ್ನು ದಾಖಲಿಸಿದ್ದರು. ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಬಂದ ಸುದ್ದಿಯನ್ನು ನೋಡಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆಯವರು ಡಿ.11 ರಂದು ತಮ್ಮ ನ್ಯಾಯವಾದಿಗಳ ಮೂಲಕ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಭಾಗವಹಿಸಿದ್ದರು. ಡಿ.11 ರಂದು ವಿಚಾರಣೆ ನಡೆದು, ಅದೇ ವಿಚಾರಣೆ ಡಿ.12ಕ್ಕೆ ಮುಂದುವರಿದು, ಈಗಾಗಲೆ ನಮ್ಮಲ್ಲಿರುವ ಎಲ್ಲ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಮಂಡಿಸಿದ್ದೇವೆ. ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ರಾಜ್ಯ ಪರಿಷತ್ತಿನಿಂದ ಸೂಕ್ತ ಅನುಮತಿ ಪತ್ರವನ್ನು ಪಡೆದು ಸಮ್ಮೇಳನವನ್ನು ಹಮ್ಮಿಕೊಳ್ಳಲು ಷರತ್ತು ಬದ್ಧ ಅನುಮತಿಯನ್ನು ನೀಡಿದ್ದಾರೆ. ಈಗಾಗಲೇ ಕೆಲ ಅನುಮತಿ ಪತ್ರಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ. ಈ ಪ್ರಕರಣವನ್ನು ಡಿ. 17ರಂದು ನಿಗದಿ ಮಾಡಿ ಆ ದಿನಾಂಕದಂದು ಸೂಕ್ತ ಅನುಮತಿ ಆದೇಶಗಳ ದೃಢೀಕೃತ ಪ್ರತಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಬೇಕೆಂದು ನ್ಯಾಯಾಧೀಶರು ಆದೇಶವನ್ನು ನೀಡಿದ್ದಾರೆ. ರಾಜ್ಯ ಪರಿಷತ್ತಿನಿಂದ ಅನುಮತಿ ಪತ್ರ ನಾಳೆ ಬೆಳಿಗ್ಗೆ ಸಿಗಲಿದ್ದು, ಆ ಕಾರ್ಯ ನಡೆಯುತ್ತಿದೆ. ಹಾಗಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಬಗ್ಗೆ ಯಾರಿಗೂ ಅನುಮಾನ ಬೇಡ. ಅತ್ಯಂತ ವಿಜೃಂಭಣೆಯಿಂದ ಸುಗಮವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಎಲ್ಲ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಅವರು ಮಾತನಾಡಿ ಸುಗಮವಾಗಿ ಹಾಗೂ ವಿಜೃಂಭಣೆಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನಿನ್ನೆ ನ್ಯಾಯಾಲಯದಲ್ಲಿ ಒಂದೆರಡು ಬ್ಯಾನರ್ ಗಳನ್ನು ತೆರವುಗೊಳಿಸುವಂತೆ ಸೂಚನೆಯನ್ನು ನೀಡಲಾಗಿದ್ದರೂ, ಎಲ್ಲ ಬ್ಯಾನರ್ ಗಳನ್ನು ತೆರವುಗೊಳಿಸುವಂತೆ ಸುದ್ದಿಗಳನ್ನು ಬಿತ್ತರಿಸಲಾಗಿತ್ತು. ಇದೆಲ್ಲವೂ ಸುಳ್ಳು ಸುದ್ದಿಯಾಗಿದ್ದು, ಈ ಬಗ್ಗೆ ನ್ಯಾಯಾಧೀಶರು ಎಚ್ಚರಿಕೆಯ ಸಂದೇಶವನ್ನು ಕೂಡ ನೀಡಿದ್ದಾರೆ. ನಮ್ಮ ನ್ಯಾಯಾವಾದಿಗಳಾದ ಕೆ.ಎಚ್.ಪಾಟೀಲ್ ಅವರು ಸುಧೀರ್ಘವಾಗಿ ತಮ್ಮ ವಾದವನ್ನು ಮಂಡಿಸಿ, ಡಿ.13ರಿಂದ ಮೂರು ದಿನಗಳವರೆಗೆ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದೇ ಸುಗಮ ರೀತಿಯಲ್ಲಿ ಸಮ್ಮೇಳನ ನಡೆಸಲು ನ್ಯಾಯಾಲಯದಿಂದ ಷರತ್ತು ಬದ್ಧ ಅನುಮತಿಯನ್ನು ಕೊಡಿಸಿದ್ದಾರೆ. ಈಗಾಗಲೇ ರಾಜ್ಯ ಪರಿಷತ್ತಿನಿಂದ ಅನುಮತಿ ಪತ್ರ ನಾಳೆ ಸಿಗಲಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಗಳನ್ನು ಮಾಡಲಾಗಿದೆ. ಅದು ಬಂದ ನಂತರ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇವೆ. ಹಾಗಾಗಿ ಸಾರ್ವಜನಿಕರಿಗೆ ಹಾಗೂ ಕನ್ನಡಾಭಿಮಾನಿಗಳಿಗೆ ಸಾಹಿತ್ಯ ಸಮ್ಮೇಳನ ನಡೆಯುವ ಕುರಿತಂತೆ ಯಾವುದೇ ಅನುಮಾನ ಬೇಡ. ನಮ್ಮ ಈ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ಬಾಧಕವಿಲ್ಲ. ಅತ್ಯಂತ ವಿಜೃಂಭಣೆಯಿಂದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ತಡೆಯಾಜ್ಣೆ ತಂದವರಿಗೆ ಮುಖಭಂಗವಾಗುವ ರೀತಿಯಲ್ಲಿ ಸಮ್ಮೇಳನವನ್ನು ಅರ್ಥಪೂರ್ಣವನ್ನಾಗಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಸಮಿತಿಯ ಪದಾಧಿಕಾರಿಗಳು, ಹಾಗೂ ಸಮ್ಮೇಳನಗ ಸ್ವಾಗತ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
