ಅಂಕೋಲಾದ ಸುಂಕಸಾಳ ಗ್ರಾಮ ಪಂಚಾಯತದ ಕಾಮಗಾರಿ ವಿಷಯ ಪ್ರಶ್ನಿಸಿದ ಸಂದೀಪ ನಾಯ್ಕ ಅವರನ್ನು ಲಕ್ಷ್ಮಣ ಗೌಡ ಎಂಬಾತರು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಸುಂಕಸಾಳದದಲ್ಲಿ ಸಂದೀಪ ನಾಯ್ಕ ಅವರು ಚಾಲಕರಾಗಿ ಕೆಲಸ ಮಾಡಿಕೊಂಡಿದ್ದಾರೆ ಸುಂಕಸಾಳ ಸಿಡ್ಲಗದ್ದೆಯ ಲಕ್ಷ್ಮಣ ಗೌಡ ಹಾಗೂ ಸಂದೀಪ ನಾಯ್ಕ ಅವರ ನಡುವೆ ಹಣಕಾಸಿನ ವ್ಯವಹಾರವಿದ್ದು, ಜುಲೈ 2ರಂದು ಅಶೋಕ ನಾಯ್ಕ ಹೊನ್ನಾವರ ಹಾಗೂ ಮತ್ತೊಬ್ಬ ಜೊತೆ ಲಕ್ಷ್ಮಣ ಗೌಡ ಅವರು ಸಂದೀಪ ನಾಯ್ಕರ ಮನೆಗೆ ಬಂದಿದ್ದರು. `ಹಣಕಾಸಿನ ವಿಷಯ ಮನೆಯಲ್ಲಿ ಮಾತನಾಡುವುದು ಬೇಡ’ ಎಂದು ಅವರೆಲ್ಲರೂ ಹೊಟೇಲ್ ಹೈಲ್ಯಾಂಡ್ ಬಳಿ ತೆರಳಿದ್ದರು.
ಆಗ, ಸಂದೀಪ ನಾಯ್ಕ ಅವರು 25 ಸಾವಿರ ರೂ ಹಣ ನೀಡಿ, `ಉಳಿದ 15 ಸಾವಿರ ರೂ ವಾರದ ನಂತರ ನೀಡುವೆ’ ಎಂದಿದ್ದರು. ಇದಕ್ಕೆ ಸಿಟ್ಟಾದ ಲಕ್ಷ್ಮಣ ಗೌಡ `ನಾನು ಹಣ ಪಡೆಯಲು ಬಂದಿಲ್ಲ. ನಿನ್ನ ಹೆಣಕ್ಕಾಗಿ ಬಂದಿದ್ದೇನೆ’ ಎನ್ನುತ್ತ ಹೊಡೆಯಲು ಶುರು ಮಾಡಿದರು. ಕಾರಣ ಕೇಳಿದಾಗ, `ನೀನು ಗ್ರಾಮ ಸಭೆಗೆ ಹೋಗುತ್ತೀಯಾ? ಗ್ರಾಮ ಪಂಚಾಯತ ವಿಷಯ ನಿನಗೆ ಏತಕೆ?’ ಎಂದು ಪ್ರಶ್ನಿಸಿದರು. ಆ ಪ್ರಶ್ನೆಗೆ ಉತ್ತರ ನೀಡಲು ಅವಕಾಶ ಕೊಡದೇ `JJM ಕೆಲಸ ಹೇಗೆ ಮಾಡಿದರೆ ನಿನಗೆ ಏನು? ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಮಾತನಾಡಿದರೆ ಹುಷಾರು’ ಎಂದು ಎಚ್ಚರಿಸಿದರು.
ಅದಾದ ನಂತರ ಸಂದೀಪ ನಾಯ್ಕ ಅವರ ಮೊಬೈಲ್ ಕಸಿದ ಲಕ್ಷ್ಮಣ ಗೌಡ ಅವರು ಅದನ್ನು ಎರಡು ತುಂಡು ಮಾಡಿದರು. ಕುತ್ತಿಗೆ ಹಿಡಿದು ಕೆಳಗೆ ಬೀಳಿಸಿ ಕಬ್ಬಿಣದ ಬಳೆಯಿಂದ ತಲೆಗೆ ಕುಟ್ಟಿದರು. ಸೊಂಟ, ಎದೆ, ಹೊಟ್ಟೆ, ಮುಖಕ್ಕೆ ಹಿಗ್ಗಾಮುಗ್ಗ ಹೊಡೆದರು. ಸಂದೀಪ ನಾಯ್ಕ ಅವರನ್ನು ಬಿಡಿಸಲು ಹೋದ ಶೋಭಾ ನಾಯ್ಕ ಅವರಿಗೂ ಬೈದು ಬೆದರಿಕೆಯೊಡ್ಡಿದರು.
ಈ ಹೊಡೆದಾಟದಿಂದ ನೊಂದ ಸಂದೀಪ ನಾಯ್ಕಅವರು ಕಾರವಾರ ಆಸ್ಪತ್ರೆಗೆ ದಾಖಲಾದರು. ಎರಡು ದಿನ ಚೇತರಿಸಿಕೊಂಡು ಅವರು ಅಂಕೋಲಾ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
