ಕುಮಟಾ ಗಂಗಾವಳಿಯಲ್ಲಿರುವ ಸರ್ಕಾರಿ ಉರ್ದು ಶಾಲೆ ಪಕ್ಕದ ಮನೆಯವರು ನಿತ್ಯವೂ ಶಾಲಾ ಆವರಣದೊಳಗೆ ತ್ಯಾಜ್ಯದ ನೀರು ಬಿಡುತ್ತಿದ್ದಾರೆ. ಇದರಿಂದ ಶಾಲೆ ಗಬ್ಬು ನಾರುತ್ತಿದ್ದು, ಸೊಳ್ಳೆ ಕಾಟವೂ ವಿಪರೀತವಾಗಿದೆ.
ಹೊಸಲು ನೀರು ಶಾಲೆಗೆ ಬಿಡುವ ಮನೆಯವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಶಾಲಾ ಮಕ್ಕಳ ಪಾಲಕರು ಸೋಮವಾರ ಪಟ್ಟುಹಿಡಿದರು. ಗ್ರಾಮ ಪಂಚಾಯತ ಆಡಳಿತದವರು ಆಗಮಿಸಬೇಕು ಎಂದು ಶಾಲಾ ಅಭಿವೃದ್ಧಿ ಸಮಿತಿಯವರು ಆಗ್ರಹಿಸಿದರು. `ಕಳೆದ ಮೂರು ವರ್ಷಗಳಿಂದ ಹೊಲಸು ನೀರು ಬರುತ್ತಿದೆ. ಪ್ರಶ್ನಿಸಿದರೆ ಜಗಳವಾಡುತ್ತಾರೆ’ ಎಂದು ಅಲ್ಲಿದ್ದವರು ದೂರಿದರು. `ಅಧಿಕಾರಿಗಳು ಭೇಟಿ ನೀಡಿದಾಗ ಒಮ್ಮೆ ಹೊಸಲು ನೀರು ಬೇರೆ ಕಡೆ ಬಿಡಲಾಗುತ್ತದೆ. ಅದಾದ ನಂತರ ಮತ್ತೆ ಶಾಲೆಯೊಳಗೆ ನುಗ್ಗಿಸಲಾಗುತ್ತದೆ’ ಎಂದು ಆಕ್ರೋಶವ್ಯಕ್ತಪಡಿಸಿದರು.
ಸ್ಥಳೀಯ ಗ್ರಾ ಪಂ ಅಧ್ಯಕ್ಷ ಈಶ್ವರ ಗೌಡ ಹಾಗೂ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ವಿನಾಯಕ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಒಂದು ದಿನದೊಳಗೆ ಸಮಸ್ಯೆ ಬಗೆಹರಿಸದೇ ಇದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಆ ಮನೆಯವರಿಗೆ ಎಚ್ಚರಿಸಿದರು. ಈ ವೇಳೆ ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ಶೌಕತ್ ಸಾಬ್ ಶಾಶ್ವತ ಕ್ರಮಕ್ಕೆ ಆಗ್ರಹಿಸಿದರು.
`ಇಲ್ಲಿ ಮಕ್ಕಳ ಕಲಿಕೆಗೆ ಸಮಸ್ಯೆಯಾಗಿದೆ’ ಎಂದು ಪಾಲಕ ಹಸನ್ ಸಾಬ್ ಅಳಲು ತೋಡಿಕೊಂಡರು. `ಆ ಮನೆಯವರಿಗೆ ಪಂಚಾಯತದಿAದ ಇಂಗುಗುAಡಿ ನಿರ್ಮಾಣಕ್ಕೆ ಹಣ ಮಂಜೂರಿಯಾಗಿದೆ. ಅದಾಗಿಯೂ ಹೊಲಸು ನೀರು ಬಿಡುವ ಕಾರಣ ಆ ಹಣ ಕಡಿತಗೊಳಿಸಿ’ ಎಂದು ಗ್ರಾ ಪಂ ಮಾಜಿ ಅಧ್ಯಕ್ಷ ಹನೀಫ್ ಸಾಬ್ ಸಲಹೆ ನೀಡಿದರು. ಅಲ್ಲಿನ ಜುಬೇರ ಅಲಿ ಸಾಬ್, ಹ್ಯಾರಿಸ್, ಇರ್ಷಾದ ಜಲಿಲ್, ರಜಾಕ್ ಮತ್ತಿತರರು ಆ ಮನೆಯವರ ವಿರುದ್ಧ ಕಿಡಿಕಾರಿದರು.
