ಕಾರವಾರ:
ನಗರದ ಪ್ರಮುಖ ರಸ್ತೆ ಹದಗೆಟ್ಟು ತಿಂಗಳುಗಳೇ ಕಳೆದರೂ ದುರಸ್ತಿ ಆಗದಿರುವುದಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ.ಎಚ್.ಒ. ಕಚೇರಿಯಿಂದ ಕಾಜುಬಾಗ್ ಮುಲ್ಲಾ ಕ್ರಾಸ್ವರೆಗಿನ ರಸ್ತೆಯ ಅವ್ಯವಸ್ಥೆ ಖಂಡಿಸಿ ಮಂಗಳವಾರ ರಸ್ತೆ ಬಂದ್ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಸಮಾಜ ಸೇವಕ ಸೂರಜ್ ಕುರುಮಕರ್ ತಿಳಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ರಸ್ತೆ ಕಾಮಗಾರಿಗಾಗಿ ರಸ್ತೆಯನ್ನು ಅಗೆದು, ಬಳಿಕ ಅರ್ಧಂಬರ್ಧ ಮಣ್ಣು ಭರ್ತಿ ಮಾಡಿ ಅದರ ಮೇಲೆ ದಪ್ಪ ಜೆಲ್ಲಿ ಕಲ್ಲುಗಳನ್ನು ಹಾಕಲಾಗಿದೆ. ಆದರೆ ಕಾಮಗಾರಿ ಪೂರ್ಣಗೊಳಿಸದೆ ರಸ್ತೆಯನ್ನು ಹಾಗೆಯೇ ಬಿಡಲಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. ಇದರಿಂದ ಡಬಲ್ ರಸ್ತೆ ಇದೀಗ ಕಿರಿದಾದ ರಸ್ತೆಯಾಗಿ ಮಾರ್ಪಟ್ಟಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ರಸ್ತೆಯಲ್ಲಿ ಹರಡಿರುವ ಜೆಲ್ಲಿ ಕಲ್ಲುಗಳಿಂದಾಗಿ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ನಿಯಂತ್ರಣ ತಪ್ಪುವ ಘಟನೆಗಳು ನಡೆಯುತ್ತಿವೆ. ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದು, ವೃದ್ಧರು, ಮಹಿಳೆಯರು ಹಾಗೂ ಶಾಲಾ ಮಕ್ಕಳು ಈ ರಸ್ತೆಯಲ್ಲಿ ಸಂಚರಿಸಲು ಆತಂಕಪಡುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ರಸ್ತೆಯ ದುಸ್ಥಿತಿಯ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದು, ದುರಸ್ತಿಗೆ ಒಂದು ವಾರದ ಗಡುವು ನೀಡಲಾಗಿತ್ತು. ಈ ವೇಳೆ ಅಧಿಕಾರಿಗಳು ಡಾಂಬರೀಕರಣ ಮಾಡುವ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ ಗಡುವು ಮುಗಿದರೂ ಕಾಮಗಾರಿ ಆರಂಭವಾಗಿಲ್ಲ. ಕನಿಷ್ಠ ರಸ್ತೆಯಲ್ಲಿರುವ ಜೆಲ್ಲಿ ಕಲ್ಲುಗಳನ್ನು ತೆರವುಗೊಳಿಸುವ ಕೆಲಸವೂ ನಡೆದಿಲ್ಲ ಎಂದು ಸಮಾಜ ಸೇವಕ ಸೂರಜ್ ಕುರುಮಕರ್ ಆರೋಪಿಸಿದ್ದಾರೆ.
ಇದರಿಂದ ಅಸಮಾಧಾನಗೊಂಡಿರುವ ನಾಗರಿಕರು ಹಾಗೂ ವಿವಿಧ ಸಂಘಟನೆಗಳು ಮಂಗಳವಾರ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿವೆ. ಪ್ರತಿಭಟನೆಯ ವೇಳೆ ಹದಗೆಟ್ಟ ಇದೇ ರಸ್ತೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಬೈಕ್ ಚಲಾಯಿಸಲು ನೀಡಿ, ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಯ ಅರಿವು ಮೂಡಿಸಲಾಗುವುದು ಎಂದು ಸೂರಜ್ ಕುರುಮಕರ್ ತಿಳಿಸಿದ್ದಾರೆ.
ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಈ ಹೋರಾಟ ರಾಜಕೀಯ ಉದ್ದೇಶದಿಂದಲ್ಲ, ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಗರಸಭೆ ಕೂಡಲೇ ಎಚ್ಚೆತ್ತು ರಸ್ತೆ ದುರಸ್ತಿ ಹಾಗೂ ಡಾಂಬರೀಕರಣ ಕಾಮಗಾರಿ ಆರಂಭಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸೂರಜ್ ಕುರುಮಕರ್ ಎಚ್ಚರಿಕೆ ನೀಡಿದ್ದಾರೆ.
