ಶಿರಸಿ: ಬೇಡ್ತಿ (ಗಂಗಾವಳಿ), ವರದಾ, ಅಘನಾಶಿನಿ ಹಾಗೂ ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಕೈಬಿಡುವಂತೆ ಆಗ್ರಹಿಸಿ ಅ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಧರಣಿ ನಡೆಯಲಿದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿರುವ ಧರಣಿಯಲ್ಲಿ 3 ಸಾವಿರಕ್ಕೂ ಅಧಿಕ ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದ್ದಾರೆ.
ಶಿರಸಿಯ ಯೋಗ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರಣಿಗಾಗಿ ವ್ಯಾಪಕ ಸಿದ್ಧತೆ ನಡೆಯುತ್ತಿದ್ದು, ಕಾರ್ಯಕ್ರಮದ ನಿರ್ವಹಣೆಗೆ ಸಂಚಾಲನಾ ಸಮಿತಿ ರಚಿಸಲಾಗಿದೆ. ಸಾಮಾಜಿಕ ಜಾಲತಾಣ, ಪತ್ರಿಕೆಗಳು ಹಾಗೂ ಲೇಖನಗಳ ಮೂಲಕ ಜನರನ್ನು ಸಂಪರ್ಕಿಸುವ ಅಭಿಯಾನ ನಡೆಸಲಾಗುತ್ತಿದೆ. ಗಣ್ಯರು, ಸಾಹಿತಿಗಳು, ಕಲಾವಿದರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಧರಣಿಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದರು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ನ್ಯಾಯಮೂರ್ತಿ ಸಿ.ಎಂ. ಜೋಶಿ, ಪರಿಸರ ತಜ್ಞ ಪ್ರೊ. ಎ.ಎನ್. ಯಲ್ಲಪ್ಪ ರೆಡ್ಡಿ, ಡಾ.ವಿ.ಎನ್. ನಾಯಕ, ಬಸವರಾಜ ಪಾಟೀಲ, ಡಾ. ಗಿರಿಧರ ಕಜೆ, ನಾರಾಯಣ ಹೆಬ್ಬಾರ, ಚಕ್ರವರ್ತಿ ಸೂಲಿಬೆಲೆ, ತೇಜಸ್ವಿನಿ ಅನಂತಕುಮಾರ, ಡಾ. ಶ್ರೀನಿವಾಸ ರೆಡ್ಡಿ, ಡಾ. ಟಿ.ವಿ. ರಾಮಚಂದ್ರ, ಶಾಂತಾರಾಮ ಸಿದ್ದಿ, ನೀರ್ನಳ್ಳಿ ರಾಮಕೃಷ್ಣ, ಡಾ. ಪ್ರಕಾಶ ಮೇಸ್ತ, ಅರವಿಂದ ನಾಯಕ ಸೇರಿದಂತೆ ಹಲವು ಗಣ್ಯರು ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪಶ್ಚಿಮಘಟ್ಟ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಹಲವು ಬೃಹತ್ ಯೋಜನೆಗಳಿಂದ ನದಿಗಳ ಧಾರಣಾ ಸಾಮರ್ಥ್ಯ ಕುಸಿದಿದೆ. ನೀರಿನ ಲಭ್ಯತೆ ಕಡಿಮೆಯಾಗಿರುವ ಸಂದರ್ಭದಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯ ಡಿಪಿಆರ್ನ್ನು ತಡೆಹಿಡಿದು, ಸಮೀಕ್ಷಾ ಕಾರ್ಯವನ್ನು ಸ್ಥಗಿತಗೊಳಿಸಬೇಕು ಎಂದು ವಿಜ್ಞಾನಿಗಳು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆಯಲು ಬೆಂಗಳೂರಿನ ಧರಣಿಯಲ್ಲಿ ಪ್ರಮುಖವಾಗಿ ಒತ್ತಾಯಿಸಲಾಗುವುದು ಎಂದರು.
ಸ್ವರ್ಣವಲ್ಲಿ ಮಠದ ಶ್ರೀಗಳ ಚಾತುರ್ಮಾಸ ಸಂದರ್ಭದಲ್ಲಿ ಕೇವಲ ಮೂರು ತಿಂಗಳಲ್ಲಿ ಭಕ್ತರಿಂದ ಮುಖ್ಯಮಂತ್ರಿಗಳಿಗೆ 15 ಸಾವಿರ ಪತ್ರಗಳನ್ನು ಬರೆಯಲಾಗಿದೆ. ಇದೀಗ ಅ.10ರಂದು ನಡೆಯುವ ಧರಣಿಯಲ್ಲಿ 3 ಸಾವಿರಕ್ಕೂ ಅಧಿಕ ಪತ್ರಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು. ಅಲ್ಲದೆ, ಬೇಡ್ತಿ ಚಳವಳಿಯ ಭಾಗವಾಗಿ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆದ ಪರಿಸರ ಗೀತೆ ರಚನಾ ಸ್ಪರ್ಧೆಯ ಗೀತೆಗಳ ಸಿಡಿಯನ್ನು ಧರಣಿ ಸಮಾವೇಶದಲ್ಲಿ ಅನಾವರಣಗೊಳಿಸಲಾಗುವುದು ಎಂದು ಹೇಳಿದರು.
ನದಿ ಜೋಡಣೆ ಯೋಜನೆಗಳ ವಿರುದ್ಧದ ಹೋರಾಟವನ್ನು ಮುಂದುವರಿಸುವ ಭಾಗವಾಗಿ ನವೆಂಬರ್ನಲ್ಲಿ ಯಲ್ಲಾಪುರದಲ್ಲಿ ರಸ್ತೆ ತಡೆ ನಡೆಸಲು ಸಿದ್ಧತೆ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬೇಡ್ತಿ-ಅಘನಾಶಿನಿ ಯೋಜನೆ ಕೈಬಿಡುವ ಕುರಿತು ಚರ್ಚಿಸಲು ತಕ್ಷಣ ದಿನಾಂಕ ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಪೂರ್ಣ ವಿರಾಮದವರೆಗೆ ಹೋರಾಟ
ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಬೆಂಗಳೂರಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ಜನರು ನೆಲೆಸಿದ್ದಾರೆ. ಜಿಲ್ಲೆಯ ಜೀವನಾಡಿಯಾಗಿರುವ ನದಿಗಳ ರಕ್ಷಣೆಗಾಗಿ ಆರಂಭಿಸಿರುವ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬೆಂಬಲ ನೀಡಬೇಕು. ನಮ್ಮ ಹೋರಾಟದ ಧ್ವನಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತಲುಪಬೇಕು ಎಂದರು.
ನದಿ ಜೋಡಣೆ ಯೋಜನೆಗಳ ವಿರುದ್ಧ ಜನಪ್ರತಿನಿಧಿಗಳು ರಾಜೀನಾಮೆ ನೀಡಲು ಸಿದ್ಧ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯ ನದಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿರುವ ವಾಸ್ತವವನ್ನು ಸರ್ಕಾರದ ಗಮನಕ್ಕೆ ತರುವ ಅಗತ್ಯವಿದೆ. ನದಿ ಜೋಡಣೆ ಯೋಜನೆಗಳಿಗೆ ಪೂರ್ಣ ವಿರಾಮ ಹಾಕುವವರೆಗೂ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕರಾದ ವಿಶ್ವನಾಥ ಶಿಗೇಹಳ್ಳಿ, ರಮೇಶ್ ದುಭಾಷಿ ಮತ್ತಿತರರು ಉಪಸ್ಥಿತರಿದ್ದರು.
ಧರಣಿ ಕುರಿತು ಹೆಚ್ಚಿನ ಮಾಹಿತಿಗಾಗಿ ವಿವೇಕ್ (9741033442) ಹಾಗೂ ರಮೇಶ್ ಭಟ್ (9880280486) ಅವರನ್ನು ಸಂಪರ್ಕಿಸಬಹುದು.
