ಕಾರವಾರ: ತಾಲೂಕಿನ ಕಡವಾಡ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಬಳಸುವ ಕಬ್ಬಿಣದ ಕಂಬಗಳು ಹಾಗೂ ಸರಳುಗಳು ತುಕ್ಕು ಹಿಡಿದು ಮುರಿದುಬಿದ್ದಿದ್ದು, ಸ್ಮಶಾನ ದುರವಸ್ಥೆಗೆ ತಲುಪಿದೆ. ಪರಿಣಾಮ ಅಂತ್ಯಸಂಸ್ಕಾರಕ್ಕೆ ಬರುವ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕದ ಅಧ್ಯಕ್ಷ ರಾಜಾ ನಾಯ್ಕ ಆರೋಪಿಸಿದ್ದಾರೆ.
ಕಡವಾಡ ಸ್ಮಶಾನದಲ್ಲಿರುವ ಚಿತಾಗಾರದಲ್ಲಿ ಹಲವು ವರ್ಷಗಳಿಂದ ಕಬ್ಬಿಣದ ಕಂಬಗಳು ಹಾಗೂ ಸರಳುಗಳು ಹಾಳಾಗಿದ್ದರೂ ಅವುಗಳನ್ನು ದುರಸ್ತಿಪಡಿಸುವ ಅಥವಾ ಹೊಸದಾಗಿ ನಿರ್ಮಿಸುವ ಕಾರ್ಯ ನಡೆದಿಲ್ಲ. ಹೀಗಾಗಿ ಅಂತ್ಯಸಂಸ್ಕಾರದ ವೇಳೆ ಕಟ್ಟಿಗೆಗಳನ್ನು ಇಡಲು ದೊಡ್ಡ ದೊಡ್ಡ ಕಲ್ಲುಗಳನ್ನು ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೃತರ ಅಂತಿಮ ಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸಲೂ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ಮಶಾನದ ಸಮಸ್ಯೆ ಕುರಿತು ಹಲವು ಬಾರಿ ಸಂಬಂಧಪಟ್ಟ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ರಾಜಾ ನಾಯ್ಕ ದೂರಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಡವಾಡ ಸ್ಮಶಾನದ ಸ್ಥಿತಿಯೇ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದರ ನಡುವೆ ಸ್ಮಶಾನದಲ್ಲಿ ಚಿತಾಗಾರದ ಕಬ್ಬಿಣದ ಕಂಬಗಳು ಹಾಗೂ ಸರಳುಗಳನ್ನು ನಿರ್ಮಿಸಲು ಜನರಿಂದ ಮನೆಮನೆಗೆ ತೆರಳಿ ಹಣ ಸಂಗ್ರಹಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಸಾರ್ವಜನಿಕ ಸ್ಮಶಾನದ ಮೂಲಸೌಕರ್ಯ ಕಲ್ಪಿಸುವ ಜವಾಬ್ದಾರಿ ಸ್ಥಳೀಯ ಆಡಳಿತದ್ದಾಗಿದ್ದು, ಈ ರೀತಿಯ ಹಣ ಸಂಗ್ರಹಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಇದಲ್ಲದೆ ಕಡವಾಡ ಸ್ಮಶಾನದಲ್ಲಿ ಸೂಕ್ತ ಮೇಲ್ಛಾವಣಿಯ ವ್ಯವಸ್ಥೆಯೂ ಇಲ್ಲ. ಹೊಸ ಚಿತಾಗಾರ ನಿರ್ಮಾಣ ಕಾಮಗಾರಿಯೂ ಅರ್ಧದಲ್ಲೇ ಸ್ಥಗಿತಗೊಂಡಿದ್ದು, ಹಲವು ದಿನಗಳಿಂದ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದೆ. ಮಳೆ ಸೇರಿದಂತೆ ಹವಾಮಾನ ವೈಪರೀತ್ಯದ ಸಂದರ್ಭಗಳಲ್ಲಿ ಅಂತ್ಯಸಂಸ್ಕಾರ ನಡೆಸುವವರು ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ.
ಸ್ಮಶಾನದ ಮೂಲಸೌಕರ್ಯಗಳ ದುಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಚಿತಾಗಾರವನ್ನು ಕೂಡಲೇ ದುರಸ್ತಿಪಡಿಸುವುದರ ಜೊತೆಗೆ ಅರ್ಧಕ್ಕೆ ನಿಂತಿರುವ ಹೊಸ ಚಿತಾಗಾರದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ರಾಜಾ ನಾಯ್ಕ ಒತ್ತಾಯಿಸಿದ್ದಾರೆ.
