ಶಿರಸಿ: ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾನದ ಹಕ್ಕಿಗೆ ಧಕ್ಕೆಯಾಗದಂತೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವ ಮೂಲಕ ಜನರ ತೀರ್ಪಿಗೆ ಗೌರವ ನೀಡಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ನಗರದ ಬಿಡ್ಕಿಬೈಲ್ನಲ್ಲಿರುವ ಗಾಂಧಿ ಪ್ರತಿಮೆಗೆ ಸೋಮವಾರ ಮಾಲಾರ್ಪಣೆ ಮಾಡುವ ಮೂಲಕ ಕಾಂಗ್ರೆಸ್ ಜಿಲ್ಲಾ ಘಟಕ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿಸಿ, ಮತ ಬಚಾವೋ–ದೇಶ ಬಚಾವೋ’ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕದ ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬ ಆರೋಪದ ಕುರಿತು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾಹಿತಿ ಸಂಗ್ರಹಿಸಿ ಬಹಿರಂಗಪಡಿಸಿದ ಬಳಿಕ, ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಅಳಿಸುವುದು ಮತ್ತು ತಮಗೆ ಅನುಕೂಲವಾಗುವ ಹೆಸರುಗಳನ್ನು ಸೇರ್ಪಡೆಗೊಳಿಸುವ ವಿಚಾರ ಚರ್ಚೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ನ್ಯಾಯಸಮ್ಮತವಾಗಿ ಹಾಗೂ ಪಾರದರ್ಶಕವಾಗಿ ನಡೆಯಬೇಕು. ಯಾವುದೇ ಅರ್ಹ ಮತದಾರನಿಗೂ ಅನ್ಯಾಯವಾಗಬಾರದು ಎಂದರು.
ದೇಶಕ್ಕೆ ಸ್ವಾತಂತ್ರ್ಯ ದೊರಕಲು ಅನೇಕರು ತ್ಯಾಗ ಮತ್ತು ಬಲಿದಾನ ಮಾಡಿದ್ದಾರೆ. ಅಂತಹ ಹೋರಾಟಗಳಿಂದ ರೂಪುಗೊಂಡ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಬಡತನ ನಿರ್ಮೂಲನೆ ಮತ್ತು ನಿರುದ್ಯೋಗ ಸಮಸ್ಯೆ ನಿವಾರಣೆ ಕಾಂಗ್ರೆಸ್ನ ಪ್ರಮುಖ ಆಶಯಗಳಾಗಿವೆ. 1885ರಲ್ಲಿ ಸ್ಥಾಪನೆಯಾದ ಕಾಂಗ್ರೆಸ್ ಪಕ್ಷವು ದೇಶದ ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಿರಂತರವಾಗಿ ಹೋರಾಡುತ್ತಿದೆ. ಜನರ ತೀರ್ಪಿಗೆ ಗೌರವ ದೊರೆತಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುತ್ತದೆ. ಶೇ.100ರಷ್ಟು ಮತದಾನಕ್ಕೆ ಪ್ರೋತ್ಸಾಹ ನೀಡುವುದರ ಜತೆಗೆ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕಾಂಗ್ರೆಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಜಾಗರೂಕತೆಯಿಂದ ಕಾರ್ಯನಿರ್ವಹಿಸಿ ಪ್ರತಿಯೊಂದು ಮತವೂ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಟಿ. ನಾಯ್ಕ ಮಾತನಾಡಿ, ಇದು ಕೇವಲ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯಲ್ಲ; ದೇಶದ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವ ಉದ್ದೇಶದ ಹೋರಾಟವಾಗಿದೆ. ಪ್ರಜಾಪ್ರಭುತ್ವದಲ್ಲಿ ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುವುದು ಗಂಭೀರ ವಿಚಾರವಾಗಿದೆ ಎಂದು ಹೇಳಿದರು.
ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಕೇಂದ್ರ ಸರ್ಕಾರ ಬದಲಾವಣೆ ಮಾಡಿದ್ದು, ಪ್ರಧಾನಮಂತ್ರಿ ಮತ್ತು ಕೇಂದ್ರ ಸಚಿವರ ಪ್ರಾಬಲ್ಯವಿರುವ ಆಯ್ಕೆ ಸಮಿತಿಯ ಮೂಲಕ ತಮಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರಿಂದ ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ಅದರ ನಿರ್ಧಾರಗಳ ನ್ಯಾಯಸಮ್ಮತತೆಯ ಕುರಿತು ಪ್ರಶ್ನೆಗಳು ಉದ್ಭವಿಸಿವೆ ಎಂದು ಆರೋಪಿಸಿದರು.
ಬಿಜೆಪಿಯನ್ನು ಬೆಂಬಲಿಸದ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂಬುದು ಅವರ ಆರೋಪವಾಗಿತ್ತು. ಇದಕ್ಕಾಗಿ ಫಾರಂ ನಂ. 7 ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಿದ್ಧಪಡಿಸಿದ ಅರ್ಜಿಗಳು ಬಿಜೆಪಿ ಕಾರ್ಯಕರ್ತರ ಕೈಗೆ ಹೇಗೆ ತಲುಪುತ್ತಿವೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ಮತದಾರರು ಮೃತಪಟ್ಟಿದ್ದಾರೆ, ಸಂಬಂಧಪಟ್ಟ ಸ್ಥಳದಲ್ಲಿ ವಾಸವಿಲ್ಲ ಅಥವಾ ದೇಶ ತೊರೆದಿದ್ದಾರೆ ಎಂಬ ಕಾರಣಗಳನ್ನು ಮುಂದಿಟ್ಟು ಅರ್ಜಿಗಳನ್ನು ಸಲ್ಲಿಸುವ ಮೂಲಕ ಅರ್ಹ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಸ್ತಕ್ಷೇಪವಿದೆ ಎಂದು ಜಿ.ಟಿ. ನಾಯ್ಕ ಆರೋಪಿಸಿದರು. ಚುನಾವಣಾ ಆಯೋಗದಲ್ಲಿ ಮೂವರು ಆಯುಕ್ತರಿದ್ದರೂ ಬಹುಮತದ ಆಧಾರದಲ್ಲಿ ತೀರ್ಮಾನ ಕೈಗೊಳ್ಳುವ ಬದಲು ಮುಖ್ಯ ಚುನಾವಣಾ ಆಯುಕ್ತರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಹಾಗೂ ಮತದಾರರ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿರುವ ಎಸ್ಐಆರ್ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಈ ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ ಭಾಗ್ವತ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಗೋಪಾಲಕೃಷ್ಣ ನಾಯಕ ಅಂಕೋಲಾ, ಸಿ.ಎಫ್. ನಾಯ್ಕ, ದೀಪಕ ದೊಡ್ಡೂರು, ಗಣೇಶ ದಾವಣಗೆರೆ, ಪ್ರಸನ್ನ ಶೆಟ್ಟಿ, ಪ್ರಸನ್ನ ನಾಯ್ಕ, ಜ್ಯೋತಿ ಪಾಟೀಲ, ಶ್ರೀಲತಾ ಕಾಳೇರಮನೆ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
