ಶಿರಸಿ :
ಅರಣ್ಯ ಪ್ರದೇಶ ಮತ್ತು ಸರ್ಕಾರಿ ಭೂಮಿ ಅತಿಕ್ರಮಣ ಮಾಡಿ ವಾಸಿಸಿದವರನ್ನು ಇ ಸ್ವತ್ತಿನಿಂದ ಹೊರಗಿಟ್ಟು, ಮನೆ ಕರ ಸಂಗ್ರಹಿಸದಿರುವ ಆದೇಶಕ್ಕೆ ರಾಜ್ಯ ಸರ್ಕಾರತಾತ್ಕಾಲಿಕ ತಡೆ ನೀಡಿದೆ. ಈ ಕಣ್ಣೊರೆಸುವ ತಂತ್ರ ನಮಗೆ ಬೇಕಾಗಿಲ್ಲ. ಅಧಿವೇಶನದಲ್ಲಿ ಮಂಡಿಸಿ ಆದೇಶವನ್ನು ಗೆಜೆಟ್ ನೋಟಿಫಿಕೇಶನ್ ಮೂಲಕ ವಾಪಸ್ ಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷೆ ಉಷಾ ಹೆಗಡೆ ಎಚ್ಚರಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮತ್ತು ಪ್ರತಿ ಗ್ರಾಮದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಗ್ರಾಮೀಣ ಜನತೆಗೆ ಈ ರೀತಿ ತೊಂದರೆ ನೀಡುವುದನ್ನು ನಾವು ಒಪ್ಪುವುದಿಲ್ಲ. ಶಾಶ್ವತ ಪರಿಹಾರ ಬೇಕು ಎಂದರು.
ನಮ್ಮ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ನವೀನ ಶೆಟ್ಟಿ ಮಾತನಾಡಿ, ಶಾಸಕ ಭಿಮಣ್ಣ ನಾಯ್ಕ ಅತಿಕ್ರಮಣ ಭೂಮಿ ಅರಣ್ಯ ಇಲಾಖೆಯ ಹೆಸರಿನಲ್ಲಿದೆ ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ದೇಶದ ಉಳಿದ ರಾಜ್ಯದಲ್ಲಿ ಪಟ್ಟಾ ನೀಡುವಿಕೆ ನಡೆಯುತ್ತಿರುವಾಗ ನಮ್ಮ ರಾಜ್ಯದಲ್ಲಿ ಮಾತ್ರ ಏಕೆ ಸಾಧ್ಯವಾಗಿಲ್ಲ ಎಂಬುದನ್ನು ಭೀಮಣ್ಣ ಯೋಚಿಸಲಿ ಎಂದರು.
ರಮೇಶ ಕುಪ್ಪಳ್ಳಿ, ಮಂಜುನಾಥ ಭಂಡಾರಿ ಇತರರಿದ್ದರು.
