ಯಲ್ಲಾಪುರ: ಅಪಘಾತದಲ್ಲಿ ಗಾಯಗೊಂಡು ರಸ್ತೆಯ ಬದಿಯಲ್ಲಿ ನರಳುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ಗಾಗಿ ಕರೆ ಮಾಡಿದಾಗ ಸೇವೆ ಲಭ್ಯವಾಗದಿದ್ದರೂ, ಅದೇ ಮಾರ್ಗದಲ್ಲಿ ಸಾಗುತ್ತಿದ್ದ ವೈದ್ಯರೊಬ್ಬರು ಮಾನವೀಯತೆ ಮೆರೆದು ಸ್ಥಳದಲ್ಲೇ ಚಿಕಿತ್ಸೆ ನೀಡಿದ ಘಟನೆ ತಾಲೂಕಿನ ಮಂಚಿಕೇರಿ ಸಮೀಪದ ತೂಕದಬೈಲ್ ಬಳಿ ಸೋಮವಾರ ನಡೆದಿದೆ.
ಕಲಘಟಗಿ ಮೂಲದ ಮಾರುತಿ ಎಂಬುವವರು ಬೈಕ್ ಸ್ಕಿಡ್ ಆಗಿ ರಸ್ತೆಯ ಪಕ್ಕದಲ್ಲಿ ಬಿದ್ದು ಗಾಯಗೊಂಡಿದ್ದರು. ಗಾಯಾಳುವಿನ ಸ್ಥಿತಿ ಕಂಡ ಸ್ಥಳೀಯರು ತಕ್ಷಣವೇ 108 ಆಂಬುಲೆನ್ಸ್ಗೆ ಕರೆ ಮಾಡಿ ನೆರವು ಕೋರಿದ್ದಾರೆ. ಆದರೆ, ಚಾಲಕ ಲಭ್ಯವಿಲ್ಲ ಎಂಬ ಉತ್ತರ ಬಂದಿದೆ. ಬಳಿಕ ಮಂಚಿಕೇರಿ ಆಸ್ಪತ್ರೆಯ ಆಂಬುಲೆನ್ಸ್ಗಾಗಿ ಸಂಪರ್ಕಿಸಿದಾಗ, ಅದು ಸೇವೆಗಾಗಿ ತೆರಳಿದೆ ಎಂಬ ಮಾಹಿತಿ ದೊರೆತಿದೆ.
ಈ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿ ಗಾಯಗೊಂಡು ನರಳುತ್ತಿದ್ದ ಮಾರುತಿ ಅವರನ್ನು ಗಮನಿಸಿದ ಶಿರಸಿಯ ಮಹಾಲಕ್ಷ್ಮಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ದಿನೇಶ್ ಹೆಗಡೆ ಅವರು ತಮ್ಮ ಕಾರನ್ನು ನಿಲ್ಲಿಸಿ ನೆರವಿಗೆ ಧಾವಿಸಿದ್ದಾರೆ. ಗಾಯಾಳುವಿನ ಸ್ಥಿತಿಯನ್ನು ಗಮನಿಸಿ ರಸ್ತೆಯಲ್ಲೇ ಡ್ರಿಪ್ಸ್ ಹಾಕಿ, ಇಂಜೆಕ್ಷನ್ ನೀಡಿ ಪ್ರಾಥಮಿಕ ಚಿಕಿತ್ಸೆ ಒದಗಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದು ಗಾಯಾಳುವಿಗೆ ನೆರವಾದ ವೈದ್ಯರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಂತರ ಯಲ್ಲಾಪುರ ತಾಲೂಕು ಆಸ್ಪತ್ರೆಯಿಂದ ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸಿದ್ದು, ಗಾಯಾಳು ಮಾರುತಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಸತೀಶ ನಾಯ್ಕ ಅವರು ಸ್ಥಳದಲ್ಲಿದ್ದು, ಸ್ಥಳೀಯರ ಸಹಕಾರದೊಂದಿಗೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.
ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ ನೆರವು ದೊರೆಯುವುದು ಅತ್ಯಗತ್ಯ. ಆದರೆ, ಆಂಬುಲೆನ್ಸ್ ಸೇವೆಗಾಗಿ ಕರೆ ಮಾಡಿದಾಗ ಚಾಲಕ ಲಭ್ಯವಿಲ್ಲ ಎಂಬ ಉತ್ತರ ಬಂದಿರುವುದು ತುರ್ತು ಸೇವೆಗಳ ಸಿದ್ಧತೆ ಹಾಗೂ ಲಭ್ಯತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ. ಇಂತಹ ಸಂದರ್ಭಗಳಲ್ಲಿ ಆಂಬುಲೆನ್ಸ್ ಸೇವೆ ವಿಳಂಬವಾಗದಂತೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.
