ಕಳಪೆ ಕಾಮಗಾರಿ ತನಿಖೆ, ತುರ್ತು ರಸ್ತೆ ದುರಸ್ತಿಗೆ ಲಾರಿ ಮಾಲೀಕರ ಸಂಘ–ಜನಶಕ್ತಿ ವೇದಿಕೆ ಆಗ್ರಹ
ಕಾರವಾರ: ರಾಷ್ಟ್ರೀಯ ಹೆದ್ದಾರಿ-52 ರ ಬಾಳೇಗುಳಿಯಿಂದ ಮಾಸ್ತಿಕಟ್ಟೆ ಮುಂದಿನವರೆಗಿನ ರಸ್ತೆ ಹದಗೆಟ್ಟು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿರುವುದನ್ನು ಖಂಡಿಸಿ, ಅಕ್ಟೋಬರ್ 25 ರಂದು ಬಾಳೇಗುಳಿ ಸಮೀಪ ವಿನೂತನ ಪ್ರತಿಭಟನೆ ನಡೆಸಲು ಉತ್ತರ ಕನ್ನಡ ಜಿಲ್ಲಾ ಲಾರಿ ಮಾಲೀಕರ ಸಂಘ ಹಾಗೂ ಜನಶಕ್ತಿ ವೇದಿಕೆ ನಿರ್ಧರಿಸಿವೆ.
ಈ ಸಂಬಂಧ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಮನವಿ ಸಲ್ಲಿಸಿದ್ದು, ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಪ್ರತಿಭಟನೆಗೆ ಸಂಬಂಧಿಸಿದ ಮನವಿ ನೀಡಿದ್ದಾರೆ.
ಇತ್ತೀಚೆಗೆ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರೂ ಕೆಲವೇ ತಿಂಗಳುಗಳಲ್ಲಿ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನ ಮೂಡಿಸಿದೆ. ಹದಗೆಟ್ಟ ರಸ್ತೆಯಿಂದ ಲಾರಿ, ಬಸ್ ಸೇರಿದಂತೆ ಎಲ್ಲ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅಪಘಾತದ ಭೀತಿಯೂ ಹೆಚ್ಚಾಗಿದೆ. ವಾಹನಗಳ ದುರಸ್ತಿ ವೆಚ್ಚ ಮತ್ತು ಸರಕು ಸಾಗಣೆಯ ವಿಳಂಬದಿಂದ ಲಾರಿ ಮಾಲೀಕರು ಹಾಗೂ ಚಾಲಕರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದ್ದಾರೆ.
ಕಳಪೆ ಕಾಮಗಾರಿಯ ಕುರಿತು ತಾಂತ್ರಿಕ ತನಿಖೆ ನಡೆಸಬೇಕು, ತಪ್ಪಿತಸ್ಥ ಗುತ್ತಿಗೆದಾರರು ಹಾಗೂ ಹೊಣೆಗಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸಬೇಕು ಎಂಬುದು ಸಂಘಟನೆಗಳ ಪ್ರಮುಖ ಆಗ್ರಹವಾಗಿದೆ. ದುರಸ್ತಿ ಪೂರ್ಣಗೊಳ್ಳುವವರೆಗೆ ಅಪಘಾತ ತಡೆಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಕ್ಟೋಬರ್ 25 ರಂದು ನಡೆಯಲಿರುವ ಪ್ರತಿಭಟನೆಯ ಕುರಿತು ಸಲ್ಲಿಸಿದ ಲಿಖಿತ ಮನವಿಯನ್ನು ಅಧಿಕಾರಿಗಳು ಸ್ವೀಕರಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆ ಹಾಗೂ ವಾಹನ ಸಂಚಾರದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ತುಳಸಿದಾಸ್ ಕಾಮತ್, ಕಾರ್ಯದರ್ಶಿ ಆನಂದ್ ಎಸ್. ನಾಯ್ಕ್, ಪದಾಧಿಕಾರಿಗಳಾದ ಕಿರಣ್ ಎ. ನಾಯ್ಕ್, ಮಂಜುನಾಥ್ ನಾಯ್ಕ್, ಜನಶಕ್ತಿ ವೇದಿಕೆಯ ಪದಾಧಿಕಾರಿಗಳಾದ ಸುರೇಶ್ ವಿ. ನಾಯ್ಕ್, ಸುರಜ್ ಕುರುಮ್ಕರ್, ರಾಮಾ ನಾಯ್ಕ್, ಕಾರ್ಯದರ್ಶಿ ಬಾಬು ಎಂ. ಶೇಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
