2029ರಲ್ಲೂ ಮೋದಿ ಪ್ರಧಾನಿಯಾಗುವ ವಿಶ್ವಾಸ; ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಬಗ್ಗೆಯೂ ಅಸಮಾಧಾನ
ಕಾರವಾರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವುದನ್ನು ಸಹಿಸದ ಕಾಂಗ್ರೆಸ್, ವಿದೇಶಿ ಶಕ್ತಿಗಳು ಹಾಗೂ ದೇಶದ್ರೋಹಿಗಳೊಂದಿಗೆ ಕೈಜೋಡಿಸಿ ದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ಕಾರವಾರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ನ ರಾಜಕೀಯ ನಡೆ, ದೇಶದ ಆರ್ಥಿಕ ಪ್ರಗತಿ ಹಾಗೂ ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದರು. ದೇಶದ ಜನರು ಕಾಂಗ್ರೆಸ್ನ ಅಹಂಕಾರಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಪಶ್ಚಿಮ ಬಂಗಾಳ, ತಮಿಳುನಾಡು, ಗುಜರಾತ್ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಕಾಂಗ್ರೆಸ್ನ ರಾಜಕೀಯ ಪ್ರಭಾವ ಕುಸಿದಿದೆ ಎಂದು ಟೀಕಿಸಿದರು.
ಒಂದು ಕಾಲದಲ್ಲಿ ದುರ್ಬಲ ಆರ್ಥಿಕತೆಗಳಲ್ಲಿ ಒಂದಾಗಿದ್ದ ಭಾರತ, ಇಂದು ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಹೇಳಿದ ಅವರು, ದೇಶದ ಪ್ರಗತಿಯನ್ನು ಸಹಿಸದ ಶಕ್ತಿಗಳು ಅಸ್ಥಿರತೆ ಮೂಡಿಸಲು ಪ್ರಯತ್ನಿಸುತ್ತಿವೆ ಎಂದು ದೂರಿದರು. 2029ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿ ನಾಲ್ಕನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಬಿಜೆಪಿ ನಾಲ್ಕಕ್ಕೆ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲಿದೆ ಎಂದರು.
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ಗೆ ಆಕ್ಷೇಪ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಹಾಗೂ ವಿಡಿಯೋ ಪ್ರದರ್ಶನದ ಮೂಲಕ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂಬ ವಿಚಾರ ಆಘಾತಕಾರಿಯಾಗಿದೆ ಎಂದು ಜೋಶಿ ಅಭಿಪ್ರಾಯಪಟ್ಟರು. ರಾಜಕೀಯ ಸಿದ್ಧಾಂತಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಹಿರಿಯ ನಾಯಕರ ವಿರುದ್ಧ ಇಂತಹ ವಿಧಾನಗಳನ್ನು ಬಳಸುವುದನ್ನು ಒಪ್ಪಲು ಸಾಧ್ಯವಿಲ್ಲ. ಇಂತಹ ಬೆಳವಣಿಗೆಗಳು ಆರೋಗ್ಯಕರ ರಾಜಕಾರಣಕ್ಕೆ ಮಾರಕವಾಗಿವೆ ಎಂದರು.
ಸ್ಟಿಂಗ್ ಆಪರೇಷನ್ ಹಿಂದೆ ಇರುವ ಪ್ರಮುಖ ಆರೋಪಿಗಳನ್ನು ವಿಶೇಷ ತನಿಖಾ ತಂಡ ತಕ್ಷಣ ಬಂಧಿಸಿ, ಪ್ರಕರಣದ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳು ಅನೈತಿಕ ಪರಿಸ್ಥಿತಿಗೆ ಸಿಲುಕುವಂತಹ ನಡವಳಿಕೆಯಿಂದ ದೂರವಿರಬೇಕು ಎಂದೂ ಎಚ್ಚರಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆ ಪರಿಶೀಲನೆಗೆ ತಜ್ಞರ ತಂಡ
ಕಬ್ಬಿನ ತೂಕದಲ್ಲಿನ ವ್ಯತ್ಯಾಸ, ಸಕ್ಕರೆ ಇಳುವರಿ ಲೆಕ್ಕಾಚಾರ ಹಾಗೂ ಯಂತ್ರಗಳ ಮೂಲಕ ಕಟಾವು ಮಾಡುವಾಗ ಉಂಟಾಗುವ ನಷ್ಟದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ದೂರುಗಳ ಕುರಿತು ಪರಿಶೀಲನೆ ನಡೆಸಲು ತಜ್ಞರ ತಂಡವನ್ನು ಕಳುಹಿಸಲಾಗುವುದು ಎಂದು ಜೋಶಿ ತಿಳಿಸಿದರು. ಈ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಮ್ಮತಿ ಸೂಚಿಸಿದ್ದಾರೆ ಎಂದರು.
ಕೇಂದ್ರದ ಎಥೆನಾಲ್ ನೀತಿಯಿಂದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಿದ್ದು, ಈ ಹಿಂದೆ ಸುಮಾರು 38 ಕೋಟಿ ರೂ. ಮೌಲ್ಯದಲ್ಲಿದ್ದ ಎಥೆನಾಲ್ ಖರೀದಿ ಈಗ 1,200 ಕೋಟಿ ರೂ.ಗೆ ಏರಿಕೆಯಾಗಿದೆ. ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ಹೆಚ್ಚಿಸುವ ಮೂಲಕ ರೈತರ ಹಿತಾಸಕ್ತಿಗೆ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದರು. ರೈತರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ ಎಂದರು.
