ದಾಂಡೇಲಿ : ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಸ್.ವಿ. ಸಂಕನೂರು ಅವರು ಅತ್ಯಂತ ಸಮರ್ಥ ಹಾಗೂ ಅನುಭವಿ ನಾಯಕರಾಗಿದ್ದು, ಪದವೀಧರರ ಎಲ್ಲಾ ಸಮಸ್ಯೆಗಳಿಗೆ ವಿಧಾನ ಪರಿಷತ್ತಿನಲ್ಲಿ ಪರಿಣಾಮಕಾರಿಯಾಗಿ ಧ್ವನಿಯಾಗುವಂತಹ ವ್ಯಕ್ತಿ ಅವರಾಗಿದ್ದಾರೆ. ಆದ್ದರಿಂದ ಪದವೀಧರರು ಪಕ್ಷಭೇದ ಮರೆತು ಅವರನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕರೆ ನೀಡಿದರು.
ಅವರು ಭಾನುವಾರ ನಗರದ ಮರಾಠಾ ಸಮಾಜ ಭವನದಲ್ಲಿ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಎಸ್.ವಿ. ಸಂಕನೂರು ಅವರು ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಮಾಡಿರುವ ಕೆಲಸ ಶ್ಲಾಘನೀಯ. ಶಿಕ್ಷಣ ಕ್ಷೇತ್ರ, ಉದ್ಯೋಗ ಕ್ಷೇತ್ರ ಹಾಗೂ ಪದವೀಧರರ ಬೇಡಿಕೆಗಳ ಬಗ್ಗೆ ಅವರಿಗೆ ಅಪಾರ ಅರಿವಿದೆ. ರಾಜ್ಯ ಸರ್ಕಾರ ಪದವೀಧರರನ್ನು ಕಡೆಗಣಿಸುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸುವುದು ಅನಿವಾರ್ಯ” ಎಂದು ಹೇಳಿದರು. ಬಿಜೆಪಿಯ ಸಂಘಟನೆಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಂಕನೂರು ಅವರ ಗೆಲುವಿಗೆ ಶ್ರಮಿಸಬೇಕು ಎಂದು ಅವರು ಮನವಿ ಮಾಡಿದರು.
ಮಾಜಿ ಶಾಸಕ ಸುನೀಲ ಹೆಗಡೆ ಅವರು ಮಾತನಾಡಿ ದಾಂಡೇಲಿ ಭಾಗದಲ್ಲಿ ಪದವೀಧರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಂಕನೂರು ಅವರ ಗೆಲುವು ನಿಶ್ಚಿತ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪದವೀಧರರಿಗೆ ಯಾವುದೇ ಯೋಜನೆಗಳು ತಲುಪಿಲ್ಲ. ಬಿಜೆಪಿ ಮಾತ್ರ ಪದವೀಧರರ ಭವಿಷ್ಯದ ಬಗ್ಗೆ ಚಿಂತನೆ ಮಾಡುವ ಪಕ್ಷ. ಆದ್ದರಿಂದ ಈ ಚುನಾವಣೆ ಪ್ರತಿಷ್ಠೆಯ ಚುನಾವಣೆಯಾಗಿದ್ದು, ಪ್ರತಿಯೊಂದು ಮತವೂ ಅತ್ಯಮೂಲ್ಯವಾಗಿದೆ” ಎಂದು ಹೇಳಿದರು.
ವೇದಿಕೆಯಲ್ಲಿ ಬಿಜೆಪಿ ದಾಂಡೇಲಿ ಮಂಡಲದ ಅಧ್ಯಕ್ಷ ಬುಧವಂತಗೌಡ ಪಾಟೀಲ, ಜೊಯಿಡಾ ಮಂಡಲದ ಅಧ್ಯಕ್ಷ ಶಿವಾಜಿ ಗೋಸಾವಿ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೀತಾ ಶಿಕಾರಿಪುರ, ದಾಂಡೇಲಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ ನಾಯಕ, ಗಿರೀಶ್ ಠೋಸೂರ, ಬಿಜೆಪಿ ಮುಖಂಡರಾದ ಚಂದ್ರಕಾಂತ ಕ್ಷೀರಸಾಗರ ಉಪಸ್ಥಿತರಿದ್ದರು. ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಪದವೀಧರ ಮತದಾರರು ಉಪಸ್ಥಿತರಿದ್ದರು.
