ಬನವಾಸಿ :
ಪ್ರಸಕ್ತ ಸಾಲಿನ ಬರಗಾಲದ ಸ್ಥಿತಿ ಈಗ ಬನವಾಸಿ ಭಾಗದಲ್ಲಿ ಗಂಭೀರ ಪರಿಸ್ಥಿತಿ ಪಡೆದುಕೊಳ್ಳುತ್ತಿದೆ. ಬೆಳೆಹಾನಿಯಿಂದ ರೈತರು ಕಂಗಾಲಾಗುತ್ತಿದ್ದು, ಭಾನುವಾರ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ದಾಸನಕೊಪ್ಪ ಸಮೀಪದ ರಂಗಾಪುರದ ಚಂದನ ಕುಬೇರ ಕ್ಯಾತಣ್ಣನವರ್ (೨೭) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಪ್ರಸಕ್ತ ಸಾಲಿನ ಬರಗಾಲದಿಂದಾಗಿ ಬೆಳೆ ಹಾನಿ ಅನುಭವಿಸಿ ಮಾಡಿರುವ ಸಾಲ ತೀರಿಸುವುದು ಹೇಗೆ ಎಂದು ಆತಂಕಗೊAಡ ರೈತನೋರ್ವ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೃಷಿ ಕಾರ್ಯಕ್ಕಾಗಿ ಈತ ಸ್ಥಳೀಯ ಸಹಕಾರಿ ಸಂಘದಲ್ಲಿ ೧. ೫ ಲಕ್ಷ ರೂ. ಸಾಲ ಪಡೆದು ಕೃಷಿ ಮಾಡಿದ್ದ. ೨.೧೩ ಎಕರೆ ಕ್ಷೇತ್ರದಲ್ಲಿ ಭತ್ತದ ಕೃಷಿ ನಡೆಸಿದ್ದ ಈತ ಹೊಲದಲ್ಲಿ ಫಸಲು ಕಾಳು ಕಟ್ಟುವ ಮುನ್ನವೇ ಒಣಗಿಹೋಗಿದ್ದನ್ನು ಕಂಡು ಮನಸ್ಸಿಗೆ ಹಚ್ಚಿಕೊಂಡಿದ್ದ ಎನ್ನಲಾಗಿದೆ. ಸಾಲ ನೀಡಿದ ಸಹಕಾರಿ ಬ್ಯಾಂಕ್ ಸಿಬ್ಬಂದಿ ಮನೆ ಬಾಗಿಲಿಗೆ ಬಂದರೆ ಎಂಬ ಆತಂಕದಲ್ಲಿದ್ದ ಈತ ಮನೆಯಲ್ಲಿದ್ದ ಬಂಗಾರವನ್ನೂ ಬ್ಯಾಂಕ್ ಒಂದರಲ್ಲಿ ಅಡವಿಟ್ಟು ಸಾಲ ಪಡೆದು, ಆ ಹಣದಿಂದ ಸಹಕಾರಿ ಸಂಘದ ಸಾಲ ತೀರಿಸಲು ನಿರ್ಧರಿಸಿದ್ದ. ಆದರೆ, ಮನನೊಂದಿದ್ದ ಆತ ಭಾನುವಾರ ಮಧ್ಯಾಹ್ನ ಇಲ್ಲಿಯ ಕೃಷಿ ಹೊಂಡಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
