ಕಾರವಾರ:
ಪ್ರವಾಸಿ ತಾಣದಲ್ಲಿ ಬಾಟಲಿಗಳನ್ನು ಎಸೆಯುತ್ತಿದ್ದುದನ್ನು ಪ್ರಶ್ನಿಸಿದ ಯುವಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಆರೋಪದ ಘಟನೆ ಕಾರವಾರ ತಾಲೂಕಿನ ಚೆಂಡಿಯಾ ಸಮೀಪದ ನಾಗರಮಡಿ ಫಾಲ್ಸ್ನಲ್ಲಿ ನಡೆದಿದೆ. ಘಟನೆಯಲ್ಲಿ ತಲೆಗೆ ಕ್ರಿಕೆಟ್ ಬ್ಯಾಟ್ನಿಂದ ಹೊಡೆದು ಗಾಯಗೊಳಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟೋಲನಾಕಾ–ಅಮದಳ್ಳಿ ನಿವಾಸಿ ಹಾಗೂ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗಿಯಾಗಿರುವ ಇಂದೇಶ ಕೊಳಂಬಕರ್ ದೂರು ನೀಡಿದವರು. ಅ.2ರಂದು ಸಂಜೆ ಸುಮಾರು 5 ಗಂಟೆಗೆ ಇಂದೇಶ ಅವರು ಸ್ನೇಹಿತ ಸರ್ವೇಶ್ ಸೀತಾರಾಮ ಚಿಂಚಣಕರ್ ಅವರೊಂದಿಗೆ ಎಕ್ಟಿವಾ ಸ್ಕೂಟರ್ನಲ್ಲಿ ನಾಗರಮಡಿ ಫಾಲ್ಸ್ಗೆ ತೆರಳಿದ್ದರು ಎನ್ನಲಾಗಿದೆ.
ಫಾಲ್ಸ್ ಬಳಿ ಸುಮಾರು 14ರಿಂದ 15 ಮಂದಿ ನೀರಿನಲ್ಲಿ ಬಾಟಲಿಗಳನ್ನು ಎಸೆಯುತ್ತಿರುವುದನ್ನು ಗಮನಿಸಿದ ಇಂದೇಶ, ಇದು ಪ್ರವಾಸಿಗರು ಆಗಮಿಸುವ ಸ್ಥಳವಾಗಿದ್ದು ಬಾಟಲಿಗಳನ್ನು ಎಸೆಯಬಾರದು ಎಂದು ಬುದ್ಧಿವಾದ ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಇಂದೇಶ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ ಎನ್ನಲಾಗಿದೆ.
ಫತೆ ಅಹಮದ್ ಡಂಬಲ್, ಮುಸ್ತಫಾ ಮಗ್ತಮ್ ಶಿರಕೋಳ ಸೇರಿದಂತೆ ಕೆಲವರು ಇಂದೇಶ ಅವರ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದು, ಬಳಿಕ ಗುಂಪಿನಲ್ಲಿದ್ದವರು ಸೇರಿ ಅವರನ್ನು ಕೆಳಗೆ ಬೀಳಿಸಿ ಕೈ ಹಾಗೂ ಕಾಲಿನಿಂದ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಂತರ ಅಲ್ಲಿಂದ ಸುಮಾರು ಒಂದು ಕಿಲೋಮೀಟರ್ ದೂರ ತೆರಳಿದ ಬಳಿಕವೂ ಆರೋಪಿಗಳ ಪೈಕಿ ಕೆಲವರು ಮತ್ತೆ ಇಂದೇಶ ಅವರನ್ನು ತಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕ್ರಿಕೆಟ್ ಬ್ಯಾಟ್ನಿಂದ ತಲೆಯ ಬಲಭಾಗಕ್ಕೆ ಹೊಡೆದು ಗಾಯಗೊಳಿಸಿದ್ದು, ಮತ್ತೊಬ್ಬ ವ್ಯಕ್ತಿ ಮುಷ್ಟಿಯಿಂದ ಮೂಗಿಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ತಿಳಿದು ಇಂದೇಶ ಅವರ ಸಹೋದರ ಸ್ಥಳಕ್ಕೆ ಆಗಮಿಸಿ ಜಗಳ ಬಿಡಿಸಲು ಮುಂದಾದಾಗ ಅವರ ಮೇಲೂ ಹಲ್ಲೆ ನಡೆಸಿ ಟಿ-ಶರ್ಟ್ ಹರಿದು ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಇಂದೇಶ ಅವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
