ದಾಂಡೇಲಿ: ಪಕ್ಷದ ಸಂಘಟನೆ ಕಟ್ಟುವುದು ಸುಲಭದ ಕೆಲಸವಲ್ಲ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಿರಂತರವಾಗಿ ಜನರ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಕಷ್ಟದ ಸಂದರ್ಭದಲ್ಲಿ ನೆರವಾಗಬೇಕು. ಆಗ ಮಾತ್ರ ಉತ್ತಮ ಹಾಗೂ ಬಲಿಷ್ಠ ಸಂಘಟನೆ ನಿರ್ಮಿಸಲು ಸಾಧ್ಯ ಎಂದು ಶಾಸಕ ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.
ನಗರದ ಮರಾಠಾ ಸಮಾಜದ ಸಭಾಭವನದಲ್ಲಿ ನಡೆದ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಮಾತ್ರ ಜನರ ಬಳಿ ತೆರಳಿ ಮತ ಕೇಳುವುದರಿಂದ ಪಕ್ಷಕ್ಕೆ ಬೆಂಬಲ ದೊರೆಯುವುದಿಲ್ಲ. ಕಾರ್ಯಕರ್ತರು ಜನರ ಸುಖ-ದುಃಖಗಳಲ್ಲಿ ಭಾಗಿಯಾಗಬೇಕು. ಪಕ್ಷವನ್ನು ಬೆಳೆಸಲು ಹಾಗೂ ಸಂಘಟನೆ ಬಲಪಡಿಸಲು ಕಾರ್ಯಕರ್ತರು ತಮ್ಮ ಸಮಯವನ್ನು ಮೀಸಲಿಡಬೇಕು ಎಂದರು.
ಜನರೊಂದಿಗೆ ಹೊಂದಿರುವ ನಿರಂತರ ಸಂಪರ್ಕ ಹಾಗೂ ಮಾಡಿರುವ ಕೆಲಸದ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಅವಕಾಶ ನೀಡಲಾಗುತ್ತದೆ. ಆದ್ದರಿಂದ ಕಾರ್ಯಕರ್ತರು ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸಭೆಗೆ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಕರ್ತರು ಗೈರಾಗಿರುವುದಕ್ಕೆ ದೇಶಪಾಂಡೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಮಾತನಾಡಿ, ಪಕ್ಷದ ಕಾರ್ಯಕರ್ತರು ಪ್ರತಿಯೊಂದು ಸಭೆಯಲ್ಲೂ ಕಡ್ಡಾಯವಾಗಿ ಭಾಗವಹಿಸುವುದರೊಂದಿಗೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ರೇಣುಕಾ ಬಂದಂ, ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವ್ಕರ, ಇಕ್ಬಾಲ್ ಶೇಖ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಮಾಜಿ ನಗರಸಭಾ ಸದಸ್ಯರು ಉಪಸ್ಥಿತರಿದ್ದರು. ಕೀರ್ತಿ ಗಾಂವ್ಕರ ಸ್ವಾಗತಿಸಿದರು. ಇಕ್ಬಾಲ್ ಶೇಖ್ ವಂದಿಸಿದರು.
