ಹಳಿಯಾಳ: ಮುಂಗಾರು ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯ ವೈಜ್ಞಾನಿಕ ಮೌಲ್ಯಮಾಪನದ ಬಳಿಕ ರಾಜ್ಯ ಸರ್ಕಾರ ಹೊಸದಾಗಿ ಘೋಷಿಸಿರುವ 40 ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಅಂಕೋಲ, ಭಟ್ಕಳ ಹಾಗೂ ಶಿರಸಿ ತಾಲೂಕುಗಳು ಸೇರ್ಪಡೆಯಾಗಿವೆ. ಇದರೊಂದಿಗೆ ಉತ್ತರ ಕನ್ನಡದ ಈ ತಾಲೂಕುಗಳ ರೈತರು ಬರದಿಂದ ಎದುರಿಸುತ್ತಿರುವ ಸಂಕಷ್ಟಕ್ಕೆ ಸರ್ಕಾರದ ಅಧಿಕೃತ ಮುದ್ರೆ ಬಿದ್ದಂತಾಗಿದೆ.
ಹೊಸದಾಗಿ 40 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದರೊಂದಿಗೆ ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಒಟ್ಟು ಸಂಖ್ಯೆ 217ಕ್ಕೆ ಏರಿಕೆಯಾಗಿದೆ. ರಾಜ್ಯದ 239 ತಾಲೂಕುಗಳ ಪೈಕಿ ಕೇವಲ 22 ತಾಲೂಕುಗಳು ಮಾತ್ರ ಬರಪೀಡಿತ ಪಟ್ಟಿಯಿಂದ ಹೊರಗುಳಿದಿವೆ. ನಾಲ್ಕು ಹಂತಗಳಲ್ಲಿ ನಡೆಸಿದ ವೈಜ್ಞಾನಿಕ ಮೌಲ್ಯಮಾಪನದ ಆಧಾರದ ಮೇಲೆ ಸರ್ಕಾರ ಈ ಪಟ್ಟಿ ಪ್ರಕಟಿಸಿದೆ.
ಹೊಸದಾಗಿ ಬರಪೀಡಿತ ಎಂದು ಘೋಷಿಸಲಾದ ತಾಲೂಕುಗಳಲ್ಲಿ ಉತ್ತರ ಕನ್ನಡದ ಅಂಕೋಲ, ಭಟ್ಕಳ, ಹಳಿಯಾಳ ಮತ್ತು ಶಿರಸಿ, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ಹಾಗೂ ಕಳಸ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿಕಾರಿಪುರ, ಶಿವಮೊಗ್ಗ, ಸೊರಬ ಮತ್ತು ತೀರ್ಥಹಳ್ಳಿ, ಧಾರವಾಡ ಜಿಲ್ಲೆಯ ಧಾರವಾಡ, ಕಲಘಟಗಿ, ಕುಂದಗೋಳ ಮತ್ತು ಅಳ್ನಾವರ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ ಮತ್ತು ಉಲ್ಲಾಳ, ಉಡುಪಿ ಜಿಲ್ಲೆಯ ಉಡುಪಿ ಹಾಗೂ ಬೈಂದೂರು ತಾಲೂಕುಗಳು ಸೇರಿವೆ.
ಇದರ ಜತೆಗೆ ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ, ಜಗಳೂರು, ಪಿರಿಯಾಪಟ್ಟಣ, ಕುಷ್ಟಗಿ, ಔರಾದ್, ಗೋಕಾಕ್, ರಾಮದುರ್ಗ, ಸವದತ್ತಿ, ಕಾಗವಾಡ, ಇಂಡಿ, ಚಡಚಣ, ತಾಳಿಕೋಟೆ, ಗದಗ, ಮುಂಡರಗಿ, ರೋಣ, ಹಿರೇಕೆರೂರು, ಮಡಿಕೇರಿ ಹಾಗೂ ಕುಶಾಲನಗರ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಲಾಗಿದೆ.
ಈವರೆಗೆ ರಾಜ್ಯದಲ್ಲಿ ಘೋಷಿಸಲಾದ 217 ಬರಪೀಡಿತ ತಾಲೂಕುಗಳ ಪೈಕಿ 185 ತಾಲೂಕುಗಳಲ್ಲಿ ತೀವ್ರ ಬರ ಹಾಗೂ 32 ತಾಲೂಕುಗಳಲ್ಲಿ ಸಾಧಾರಣ ಬರ ಪರಿಸ್ಥಿತಿ ಇದೆ ಎಂದು ಸರ್ಕಾರದ ಮೌಲ್ಯಮಾಪನದಲ್ಲಿ ತಿಳಿಸಲಾಗಿದೆ. ನಾಲ್ಕು ಹಂತಗಳ ಬರ ಘೋಷಣೆಯ ಬಳಿಕ ರಾಜ್ಯದ ಬಹುತೇಕ ತಾಲೂಕುಗಳು ಬರದ ಪಟ್ಟಿಗೆ ಸೇರ್ಪಡೆಯಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಮಳೆ ಕೊರತೆಯ ಪರಿಣಾಮ ಮತ್ತಷ್ಟು ಸ್ಪಷ್ಟವಾಗಿದೆ.
