ಕಾರವಾರ: ನಗರದ ಮ್ಯಾಕ್ಸ್ ಮಾಲ್ ಸಮೀಪ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪದವರೆಗೆ ತಲುಪಿದ್ದು, ಒಂದೇ ಘಟನೆಯ ಸಂಬಂಧ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಕಾರವಾರದ ಮೀನು ವ್ಯಾಪಾರಿ ಸಿರಾಜ್ ನೀಡಿದ ದೂರಿನಂತೆ ರಶೀದ್ ಮೆಹಬೂಬ್ ಖಾನ್, ಸಂತೋಷ್ ವೆಂಕಟೇಶ್ ವಡ್ಡರ್ ಹಾಗೂ ಸಾಹಿಲ್ ಬ್ಯಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 3ರಂದು ರಾತ್ರಿ 8ರಿಂದ 8.15ರ ನಡುವೆ ಸಿರಾಜ್ ಅವರು ತಮ್ಮ ಸಹೋದರ ಕಮಾಲ್ ಶಕೀಲ್ ಅಹಮದ್ ಶೇಖ್ ಅವರೊಂದಿಗೆ ಕಾರಿನಲ್ಲಿ ಮ್ಯಾಕ್ಸ್ ಮಾಲ್ ಕಡೆಗೆ ತೆರಳುತ್ತಿದ್ದಾಗ ಆರೋಪಿಗಳು ಕಾರನ್ನು ತಡೆದು, ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೇಳೆ ರಶೀದ್ ಕಲ್ಲಿನಿಂದ ಕಮಾಲ್ ಅವರ ಹಣೆಗೆ ಹೊಡೆದಿದ್ದು, ಸಿರಾಜ್ ಕಾರಿನಲ್ಲಿದ್ದ ರಾಡ್ ತೆಗೆದುಕೊಂಡಾಗ ಸಾಹಿಲ್ ಅದೇ ರಾಡ್ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.
ಇದೇ ಘಟನೆಯ ಕುರಿತು ರಶೀದ್ ಮೆಹಬೂಬ್ ಖಾನ್ ನೀಡಿದ ದೂರಿನ ಆಧಾರದ ಮೇಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಶೀದ್ ಅವರ ಆರೋಪದಂತೆ, ಅವರು ಸಂತೋಷ್ ಹಾಗೂ ಸಾಹಿಲ್ ಅವರೊಂದಿಗೆ ಮ್ಯಾಕ್ಸ್ ಮಾಲ್ನಿಂದ ಸಿಟಿ ಮೊಬೈಲ್ ಶಾಪ್ ಕಡೆಗೆ ತೆರಳುತ್ತಿದ್ದಾಗ ಸಿರಾಜ್ ಹಾಗೂ ಇತರರು ಕಾರಿನಲ್ಲಿ ಬಂದು ದಾರಿ ತಡೆದು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಸಿರಾಜ್ ಸ್ಟೀಲ್ ರಾಡ್ನಿಂದ ಹಲ್ಲೆ ನಡೆಸಿದ್ದು, ಸಂತೋಷ್ ಹೆಲ್ಮೆಟ್ನಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎರಡೂ ದೂರುಗಳ ಆಧಾರದ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
