ಕಾರವಾರ: ಸೀಬರ್ಡ್ ಯೋಜನೆಗಾಗಿ ಭೂಮಿ ಕಳೆದುಕೊಂಡ ಸ್ಥಳೀಯರು ಹಾಗೂ ನಿರಾಶ್ರಿತರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಭರವಸೆ ಈಡೇರಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಇತ್ತೀಚಿನ ನೇಮಕಾತಿಯಲ್ಲಿ ಹೊರರಾಜ್ಯದ ಒಂದೇ ಪಿನ್ಕೋಡ್ಗೆ ಸೇರಿದ 25 ಮಂದಿಯ ಆಯ್ಕೆ ನಡೆದಿದೆ ಎಂದು ಶ್ರೀ ಹಟ್ಟಿಕೇಶ್ವರ ಸ್ಥಳೀಯ ಹಾಗೂ ಸೀಬರ್ಡ್ ನಿರಾಶ್ರಿತ, ಕೂಲಿಕಾರ್ಮಿಕರ ಅಸಂಘಟಿತ ಸಂಘ ಆರೋಪಿಸಿದೆ.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಸುನೀಲ್ ನಾಯ್ಕ, ಸೀಬರ್ಡ್ ಯೋಜನೆಗಾಗಿ ತಮ್ಮ ಭೂಮಿ, ನೆಲ ಹಾಗೂ ಜಲವನ್ನು ತ್ಯಾಗ ಮಾಡಿದ ಸ್ಥಳೀಯರು ಮತ್ತು ನಿರಾಶ್ರಿತರನ್ನೇ ಉದ್ಯೋಗಾವಕಾಶಗಳಿಂದ ದೂರವಿಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಜ್ರಕೋಶದಲ್ಲಿರುವ ಎನ್ಇಡಿ ಇಲಾಖೆಯ ಸಿವಿಲಿಯನ್ ವಿಭಾಗದಲ್ಲಿ 260 ಟ್ರೇಡ್ಸ್ಮೇಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ನೇಮಕಾತಿಯಲ್ಲಿ ಹೊರರಾಜ್ಯದ ಒಂದೇ ಪಿನ್ಕೋಡ್ಗೆ ಸೇರಿದ 25 ಅಭ್ಯರ್ಥಿಗಳು ಆಯ್ಕೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳೀಯರು, ಸೀಬರ್ಡ್ ನಿರಾಶ್ರಿತರು ಸೇರಿದಂತೆ ಕರ್ನಾಟಕದ ಅಭ್ಯರ್ಥಿಗಳಿಗೆ ಈ ನೇಮಕಾತಿಯಲ್ಲಿ ಅವಕಾಶ ಸಿಗದಿರುವುದು ಪ್ರಶ್ನಾರ್ಹವಾಗಿದೆ ಎಂದು ಸುನೀಲ್ ನಾಯ್ಕ ಹೇಳಿದರು.
ಇದೇ ರೀತಿಯಲ್ಲಿ 70 ಫೈರ್ಮ್ಯಾನ್ ಹುದ್ದೆಗಳ ನೇಮಕಾತಿಯಲ್ಲಿಯೂ ಹೊರರಾಜ್ಯದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ದೊರೆತಿದೆ ಎಂದು ಅವರು ಆರೋಪಿಸಿದರು. ರಕ್ಷಣಾ ಯೋಜನೆಗಾಗಿ ಸ್ಥಳೀಯರು ತಮ್ಮ ಜಮೀನುಗಳನ್ನು ತ್ಯಾಗ ಮಾಡಿದ್ದು, ಯೋಜನೆಯ ಪರಿಣಾಮವನ್ನು ಎದುರಿಸುತ್ತಿರುವ ಕುಟುಂಬಗಳ ಯುವಕರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಆದರೆ ಈ ಬೇಡಿಕೆಯನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ ಎಂದು ದೂರಿದರು.
ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಕುರಿತು ಸೀಬರ್ಡ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಭೂಸ್ವಾಧೀನದ ಸಂದರ್ಭದಲ್ಲಿ ಜಿಲ್ಲಾಡಳಿತ, ಶಾಸಕರು ಹಾಗೂ ಸಂಸದರ ನೇತೃತ್ವದಲ್ಲಿ ಸ್ಥಳೀಯರಿಗೆ ಉದ್ಯೋಗ ಆದ್ಯತೆ ನೀಡುವ ಬಗ್ಗೆ ಠರಾವು ಮಾಡಿದ್ದರೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿತ್ತು ಎಂಬ ಉತ್ತರ ನೀಡಲಾಗುತ್ತಿದೆ ಎಂದು ಸುನೀಲ್ ನಾಯ್ಕ ತಿಳಿಸಿದರು.
ಸೀಬರ್ಡ್ನ ಗ್ರೂಪ್ ‘ಡಿ’ ಹುದ್ದೆಗಳ ನೇಮಕಾತಿ ಕಾರವಾರದಲ್ಲಿಯೇ ನಡೆಯಬೇಕು. ನೇಮಕಾತಿಯಲ್ಲಿ ಕನಿಷ್ಠ ಶೇ.70ರಷ್ಟು ಹುದ್ದೆಗಳನ್ನು ಸ್ಥಳೀಯರು ಹಾಗೂ ಸೀಬರ್ಡ್ ನಿರಾಶ್ರಿತರಿಗೆ ಮೀಸಲಿಡಬೇಕು ಎಂದು ಅವರು ಆಗ್ರಹಿಸಿದರು. ಈ ಕುರಿತು ಶಾಸಕ, ಸಂಸದ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಬೇಡಿಕೆಗೆ ಸ್ಪಂದನೆ ದೊರೆಯದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸೀಬರ್ಡ್ ನಿರಾಶ್ರಿತರಾದ ದಿಗಂಬರ ಆರ್. ಗೌಡ, ಸುಬ್ರಮಣ್ಯ ಗೌಡ, ಪ್ರಶಾಂತ ನಾಯ್ಕ ಹಾಗೂ ಗುರು ಗೌಡ ಉಪಸ್ಥಿತರಿದ್ದರು.
