ಮುಜರಾಯಿ ಇಲಾಖೆ ಸಚಿವ
ಬಸವಂತಪ್ಪ ಕೃತಿ ಬಿಡುಗಡೆ ಮಾಡಿದರು.
ದಾಂಡೇಲಿ: ಸಂವಿಧಾನ ಓದು ಅಭಿಯಾನ, ಕರ್ನಾಟಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉತ್ತರ ಕನ್ನಡ ಸಮಾನ ಮನಸ್ಕ ಸಂಘಟನೆಗಳು ಸಹಯೋಗದಲ್ಲಿ ಬೆಂಗಳೂರಿನ ಜನ ಪ್ರಕಾಶನ ಪ್ರಕಟಿಸಿದ ಮೆಮೊರಬಲ್ ಟ್ರಯಲ್ಸ್ (ಅವಿಸ್ಮರಣೀಯ ಪ್ರಕರಣಗಳು)
ಕೃತಿ ಜನಾರ್ಪಣೆ ಕಾರ್ಯಕ್ರಮ ನಗರದ ಕರ್ನಾಟಕ ಸಂಘದ ಸಭಾಭವನದಲ್ಲಿ ಶನಿವಾರ ನಡೆಯಿತು.
ರಾಜ್ಯ ಮೀನುಗಾರಿಕೆ ಬಂದರು ಹಾಗೂ ಒಳನಾಡು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ಬಸವಂತಪ್ಪ ಕೃತಿ ಲೋಕಾರ್ಪಣೆ ಮಾಡಿ, ಮಾತನಾಡಿ ಇದೇ ಮೊದಲ ಬಾರಿಗೆ ನಾನು ಪುಸ್ತಕ ಬಿಡುಗಡೆ ಮಾಡಿದ್ದೇನೆ. ಅದು ಸಮಾನತೆ,ಜನಪರ ನ್ಯಾಯಮೂರ್ತಿಗಳ ಕೃತಿ ಬಿಡುಗಡೆ ಮಾಡಿದ್ದು ನನ್ನ ಪುಣ್ಯ. ಇವರು ಸರ್ಕಾರಕ್ಕೆ ನೀಡಿರುವ ವರದಿಗಳನ್ನು ಓದಿದ್ದೇನೆ. ಸಮಾಜದಲ್ಲಿ ಒಳ್ಳೆಯ ವಿಷಯ ಬಿತ್ತುವ ಇಂತ ಕೃತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡುವ ಆಶಾಭಾವನೆ ಇದೆ. ಯುವಕರು ಹೆಚ್ಚು ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಬೇಕು. ಈ ಪುಸ್ತಕಗಳನ್ನು ಸರ್ಕಾರದ ವತಿಯಿಂದ ಶಾಲಾ ಕಾಲೇಜುಗಳಿಗೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೃತಿಯ ಲೇಖಕರಾದ ಹೆಚ್.ಎನ್.ನಾಗಮೋಹನ
ದಾಸ್ ಮಾತನಾಡಿ ಸಂವಿಧಾನ ಓದು ಅಭಿಯಾನಕ್ಕೆ ಕಾರವಾರ ಜಿಲ್ಲೆ ಕಾರಣ. ಪೌರಕಾರ್ಮಿಕನ ಮಗ ಇಂದು ಮಂತ್ರಿಯಾಗಿ ಈ ವೇದಿಕೆಯಲ್ಲಿ ಬಂದು ಕೃತಿ ಬಿಡುಗಡೆ ಮಾಡಿದ್ದು ಸಂತೋಷ ತಂದಿದೆ. ಬಡವರು ಪ್ರಜಾಪ್ರಭುತ್ವಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಅದೇ ಮೆಮೊರಬಲ್ ಟ್ರಯಲ್ಸ್ ಆಗಿದೆ. ಇಂದು ನ್ಯಾಯಾಂಗ ದೊಡ್ಡ ವ್ಯವಸ್ಥೆ ಆಗಿದೆ ಅದನ್ನೇ ಬಳಿಕ ಮಾಡಿ ಬಡವರನ್ನು ನೇಣಿಗೆ ಏರಿಸಿದೆ.ಇದನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಕೃತಿ ಬೆಳಕು ಚೆಲ್ಲುತ್ತದೆ ಎಂದರು.
ದಾಂಡೇಲಿಯ ಲೇಖಕಿ ನಾಗರೇಖಾ ಗಾಂವಕರ ಕೃತಿ ಪರಿಚಯಿಸಿ ಮಾತನಾಡಿ ಓದುಗರ ಮೇಲೆ ಗಂಭೀರ ಪರಿಣಾಮ ಬೀರಬಲ್ಲ ಹಾಗೂ ಬದಲಾವಣೆಗೆ ಪ್ರೇರಣೆ ನೀಡುವ ಕೃತಿ ಇದಾಗಿದೆ.ಪ್ರಶ್ನಿಸುವ ಶಕ್ತಿಯನ್ನು ಹೇಗೆ ವ್ಯವಸ್ಥೆ ಹತ್ತಿಕ್ಕಿತ್ತದೆ ಎಂದು ತೋರಿಸಿದೆ. ನಾವು ಪ್ರಶ್ನಿಸುವ ಮೂಲಕವೇ ಕಲಿಯುತ್ತೇವೆ. ಕೃತಿ ಓದಿದ ನಂತರ ಅದರ ಅರ್ಥ, ವ್ಯಾಖ್ಯಾನವನ್ನು ನಿರ್ಧರಿಸುವುದನ್ನು ಓದುಗರಿಗೆ ಬಿಟ್ಟು ಚಿಂತನೆಗೆ ಹಚ್ಚುತ್ತದೆ.
ವೈಚಾರಿಕತೆ, ಸಾಮಾಜಿಕ ಬದಲಾವಣೆಗೆ ಕಾರಣವಾಗುವ ಈ ಕೃತಿಯನ್ನು ಯುವಕರು ಓದಬೇಕು ಎಂದು ಸಲಹೆ ನೀಡಿದರು.
ಜನ ಪ್ರಕಾಶನದ ಬಿ.ರಾಜಶೇಖರ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಕೃತಿ ಮಹತ್ವ ಅರಿತು ನಾವು ಮತ್ತೆ ದಾಂಡೇಲಿಯಲ್ಲಿ ಬಿಡುಗಡೆ ಮಾಡುತ್ತಿರುವುದು ಹೆಮ್ಮೆ ವಿಷಯವಾಗಿದೆ. ಜನಸಾಮಾನ್ಯರಿಗೆ ಕಾನೂನಿನ ಪರಿಜ್ಞಾನ ನೀಡುವ ಕೃತಿಯಾಗಿದೆ. ಇಲ್ಲಿ ವೃತ್ತಿ ಅನುಭವದ ಜೊತೆಗೆ ತಮ್ಮ ಸೃಜನಶೀಲತೆಯನ್ನು ಲೇಖಕರು ತೋರಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎಸ್. ವಾಸರೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಅರಣ್ಯ ಭೂಮಿ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ, ನ್ಯಾಯವಾದಿ ರಾಜಶೇಖರ ಐ.ಹೆಚ್, ರಾಜಶೇಖರ ಕಿಗ್ಗಾ, ಜನ ಸಂಘಟಕ ಡಿ. ಸ್ಯಾಮ್ಸನ್, ದಲಿತ ಹೋರಾಟಗಾರ ಮಾವಳ್ಳಿ ಶಂಕರ,ಅನಂತ ನಾಯ್ಕ ಇದ್ದರು. ನ್ಯಾಯವಾದಿ ಕೆ. ಎಚ್. ಪಾಟೀಲ ನಿರೂಪಿಸಿ, ವಂದಿಸಿದರು.ರತ್ನದೀಪ ಎನ್. ಎಮ್.ಸ್ವಾಗತಿಸಿದರು.
