ಯಲ್ಲಾಪುರದ ಹುಟಕಮನೆಯಲ್ಲಿ ಕೃಷಿ ಭೂಮಿ ಖರೀದಿಸಿದವರು ಗುಡ್ಡ ಅಗೆಯುವ ವೇಳೆ ಮಣ್ಣಿನ ಅಡಿ ಹೂತಿದ್ದ ಮರದ ತುಂಡುಗಳು ಸುರಿಯುತ್ತಿರುವ ಮಳೆಗೆ ಹೊರ ಬಿದ್ದಿದೆ. ಗುಡ್ಡದ ವಿವಿಧ ಭಾಗಗಳಲ್ಲಿ ಮರದ ತುಂಡುಗಳು ಕಾಣಿಸುತ್ತಿದ್ದು, ಅದರಲ್ಲಿಯೂ ಕೆಲ ಮರಗಳು ಹೊಸದಾಗಿ ಚಿಗುರುತ್ತಿವೆ.
ಕೆಲ ತಿಂಗಳ ಹಿಂದೆ ಹುಟಕಮನೆಯಲ್ಲಿನ ಗುಡ್ಡ ಕೊರೆತ ಪ್ರಕರಣ ಭಾರೀ ಪ್ರಮಾಣದಲ್ಲಿ ಸದ್ದು ಮಾಡಿತ್ತು. ಭೂಮಿ ಸರ್ವೇ ಕಾರ್ಯ ನಡೆಸದೇ ಗುಡ್ಡ ಕೊರೆತ ಮಾಡಿದ್ದರಿಂದ ಅರಣ್ಯ ಭೂಮಿಯನ್ನು ಅತಿಕ್ರಮಿಸಿದ ಆರೋಪವ್ಯಕ್ತವಾಗಿತ್ತು. ಗುಡ್ಡ ಕೊರೆತದ ಅವಧಿಯಲ್ಲಿ ಅಲ್ಲಿದ್ದ ಮರಗಳನ್ನು ಭೂಮಿಯ ಅಡಿ ಹೂಳಲಾಗಿದೆ ಎಂಬ ಆರೋಪವ್ಯಕ್ತವಾಗಿತ್ತು. ಆದರೆ, ಇಡಗುಂದಿ ವಲಯದ ಅರಣ್ಯಾಧಿಕಾರಿಗಳು ಇದನ್ನು ಅಲ್ಲಗಳೆದಿದ್ದರು.
ಅವೈಜ್ಞಾನಿಕ ರೀತಿಯಲ್ಲಿ ಗುಡ್ಡ ಕೊರೆದ ಪರಿಣಾಮ ಆ ಭಾಗದ ಜನ ಗುಡ್ಡ ಕುಸಿತದ ಆತಂಕವ್ಯಕ್ತಪಡಿಸಿದ್ದರು. ಸದ್ಯ ಧಾರಾಕಾರ ಮಳೆಯಾಗುತ್ತಿದ್ದು, ಗುಡ್ಡ ಕುಸಿತ ಆಗಿಲ್ಲ. ಆದರೆ, ಅಲ್ಲಲ್ಲಿ ಮಣ್ಣು ಬಿರುಕು ಮೂಡಿದ್ದು ಕಾಣಿಸುತ್ತಿದೆ. ಜೊತೆಗೆ ಆ ಪ್ರದೇಶದಲ್ಲಿದ್ದ ಮರಗಳನ್ನು ಯಂತ್ರಗಳ ನೆರವಿನಿಂದ ಮಣ್ಣಿನ ಅಡಿ ಹೂತಿರುವುದಕ್ಕೆ ಸಾಕ್ಷಿ ಸಿಕ್ಕಿದೆ. ಹೀಗಾಗಿ ಅರಣ್ಯಾಧಿಕಾರಿಗಳು ಹೇಳಿದ ಮಾತು ಸುಳ್ಳಾಗಿದೆ.
`ಮರಗಳ ಮಾರಣಹೋಮ ನಡೆಸಿದವರ ವಿರುದ್ಧ ಈಗಾದರೂ ಅರಣ್ಯ ಇಲಾಖೆ ಪ್ರಕರಣ ದಾಖಲಿಸಬೇಕು. ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ ಬೆಲೆ ಬಾಳುವ ಮರಗಳನ್ನು ಸರ್ಕಾರದ ವಶಕ್ಕೆಪಡೆಯಬೇಕು’ ಎಂದು ದೂರುದಾರ ಮಂಜುನಾಥ ಹೆಗಡೆ ಆಗ್ರಹಿಸಿದ್ದಾರೆ.
