ಕಾರವಾರ ನಗರಸಭೆಯಲ್ಲಿ ಬಿಜೆಪಿ ಆಡಳಿತವಿದೆ. ಆದರೂ, ಬಿಜೆಪಿ ಕಚೇರಿ ಮುಂದಿನ ಬೀದಿ ನಾಯಿ ಹಾವಳಿ ನಿಯಂತ್ರಣ ಸಾಧ್ಯವಾಗಿಲ್ಲ!
ಕಾರವಾರ ನಗರದ ಕೆಎಚ್ಬಿ ಕಾಲೋನಿಯಲ್ಲಿ ಬಿಜೆಪಿ ಪಕ್ಷದ ಕಚೇರಿಯಿದೆ. ಇಲ್ಲಿ ಹೋದವರಿಗೆ ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಬರುತ್ತವೆ. ಅದರಲ್ಲಿಯೂ ಸಂಜೆ ವೇಳೆ ಅಲ್ಲಿ ಓಡಾಡುವುದು ಸಹ ಕಷ್ಟ. ಆ ಪ್ರಮಾಣದಲ್ಲಿ ಬೀದಿ ನಾಯಿಗಳು ಗುಂಪು ಕಟ್ಟಿಕೊಂಡು ದಾಳಿ ನಡೆಸುತ್ತಿವೆ.
ಮೈ ತುಂಬ ಕಜ್ಜಿಗಳನ್ನು ಹೊಂದಿದ ನಾಯಿ, ಜೊಲ್ಲು ಸುರಿಸುವ ನಾಯಿ, ಕಾಲಿಲ್ಲದ ಕುಂಟು ನಾಯಿ ಸೇರಿ ಬಗೆ ಬಗೆಯ ನಾಯಿಗಳು ಇಲ್ಲಿವೆ. ಒಂದಕ್ಕಿoತ ಇನ್ನೊಂದು ಶೌರ್ಯ ಪ್ರದರ್ಶಿಸಿ ಮಾನವರ ಮೇಲೆ ದಾಳಿ ನಡೆಸುತ್ತಿವೆ. ಅದರಲ್ಲಿಯೂ ಮಹಿಳೆ ಹಾಗೂ ಚಿಕ್ಕ ಮಕ್ಕಳನ್ನು ಕಂಡರೆ ಆ ನಾಯಿಗಳು ಬೆನ್ನಟ್ಟಿ ಬರುತ್ತವೆ. ಸೋನಾರವಾಡ, ಪಾದ್ರಿಭಾಗ, ಮಾರುಕಟ್ಟೆ ಪ್ರದೇಶ ಸಹ ಬೀದಿ ನಾಯಿಗಳ ಹಾವಳಿಯಿಂದ ಹೊರತಾಗಿಲ್ಲ.
ಕಾರವಾರ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾದರೂ ನಗರ ಆಡಳಿತ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮೀನು ಮಾರುಕಟ್ಟೆ, ಶಾಲೆಗಳು, ಆಸ್ಪತ್ರೆಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ಎಲ್ಲಿ ನೋಡಿದರೂ ಅಲ್ಲಿ ಬೀದಿ ನಾಯಿಗಳು ಕಾಣುತ್ತಿವೆ. ಬಿಜೆಪಿ ಕಚೇರಿಗೆ ಬರುವ ಅನೇಕರು ಬೀದಿ ನಾಯಿ ಹಾವಳಿಗೆ ಬೆದರಿ ಅಲ್ಲಿ ಹೋಗುವುದನ್ನೇ ನಿಲ್ಲಿಸಿದ್ದಾರೆ. ಗ್ರಾಮೀಣ ಭಾಗದ ಕಾರ್ಯಕರ್ತರು ಕಚೇರಿ ಸುತ್ತಲಿನ ನಾಯಿ ಹಾವಳಿಗೆ ಬೇಸತ್ತಿದ್ದಾರೆ.
ನಗರದ ಅನೇಕ ಕಡೆ ಹಲವರು ಬೀದಿ ನಾಯಿ ದಾಳಿಗೆ ತುತ್ತಾಗಿದ್ದಾರೆ. ಮಕ್ಕಳು ಮತ್ತು ವೃದ್ಧರು ಈ ಸಮಸ್ಯೆಯಿಂದ ಅತಿ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿ ವೇಳೆ ಬೀದಿಗಳಲ್ಲಿ ಸಂಚರಿಸಲು ಜನ ಹೆದರುತ್ತಿದ್ದಾರೆ. ಸ್ಕೂಟಿ-ಬೈಕು ಸವಾರರನ್ನು ಸಹ ಬೀದಿ ನಾಯಿಗಳು ಬೆನ್ನತ್ತಿ ಬಂದಿವೆ. ತರಾತುರಿಯಲ್ಲಿ ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡವರ ಸಂಖ್ಯೆ ಲೆಕ್ಕವಿಲ್ಲ.
ನಗರದ ಮೀನು ಮಾರುಕಟ್ಟೆಯಲ್ಲಿ ಬಳಿ ನಾಯಿಗಳ ಕಾಟ ಹೆಚ್ಚಾಗಿದ್ದರಿಂದ ಜನರು ಮಾರುಕಟ್ಟೆಗೆ ಬರುಲು ಹಿಂದೇಟು ಹಾಕುತ್ತಿದ್ದಾರೆ. ರಾತ್ರಿ ವೇಳೆ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಇದರಿಂದ ಜನರು ಕಡಲತೀರಕ್ಕೆ ತೆರಳುವುದು ಆತಂಕ ಸೃಷ್ಟಿಸಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ವಿವಿಧ ರಸ್ತೆಗಳಲ್ಲಿ ನಾಯಿಗಳು ಹೆಚ್ಚಾಗಿದ್ದರಿಂದ ಕೆಲವು ಸಾಕಷ್ಟು ಸಲ ಅಪಘಾತಕ್ಕೂ ಕಾರಣವಾಗುತ್ತಿದೆ.
ನಗರ ವ್ಯಾಪ್ತಿಯಲ್ಲಿ ನಗರಸಭೆಯಿಂದ ಶ್ವಾನಗಳ ಸಂತಾನ ಹರಣ ಚಿಕಿತ್ಸೆ ಮಾಡಲಾಗುತ್ತಿದೆ. ಆದರೆ ಪ್ರತಿ ವರ್ಷ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಗರಸಭೆಯಿಂದ ಮಾಡಲಾಗುವ ಸಂತಾನ ಹರಣ ಚಿಕಿತ್ಸೆ ಉಪಯೋಗವಾಗುತ್ತಿಲ್ಲ ಎಂಬ ದೂರಿದೆ.
