ಕುಮಟಾ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಕಡವೆಯ ಮೇಲೆ ದಾಳಿ ನಡೆಸಿ ಸಾಯಿಸಿರುವ ಘಟನೆ ತಾಲೂಕಿನ ಅಂತ್ರವಳ್ಳಿ ಗ್ರಾಮದ ಬರಗದ್ದೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮಂಗಳವಾರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಕಾಡಿನಿಂದ ತೋಟದ ಕಡೆಗೆ ಕಡವೆಯನ್ನು ಓಡಿಸಿಕೊಂಡು ಬಂದ ಚಿರತೆ, ಅದರ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಬಳಿಕ ಕಡವೆಯ ದೇಹದ ಭಾಗಶಃ ಮಾಂಸವನ್ನು ತಿಂದು ಸ್ಥಳದಿಂದ ತೆರಳಿದೆ. ಅಕ್ಕಪಕ್ಕದ ಮನೆಗಳ ನಾಯಿಗಳು ಜೋರಾಗಿ ಬೊಗಳಲಾರಂಭಿಸಿದ ಹಿನ್ನೆಲೆಯಲ್ಲಿ ಚಿರತೆ ಅಲ್ಲಿಂದ ಕಾಡಿನತ್ತ ಓಡಿಹೋಗಿದೆ ಎಂದು ತಿಳಿದುಬಂದಿದೆ.
ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ. ಬುಧವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
