ಹಳಿಯಾಳ: ಕರ್ಲಕಟ್ಟಾ ಗ್ರಾಮದ ಮುಖ್ಯ ರಸ್ತೆಯ ತಿರುವಿನಲ್ಲಿ ಗ್ಯಾಸ್ ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ ವಾಹನ ಸ್ವಯಂ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಮಗುಚಿಬಿದ್ದ ಘಟನೆ ನಡೆದಿದೆ. ತುರ್ತು ಕರೆ ಸ್ವೀಕರಿಸಿ ಸ್ಥಳಕ್ಕೆ ಧಾವಿಸಿದ ಹಳಿಯಾಳ ERSS 112 ಸಿಬ್ಬಂದಿಗಳು ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ರವಾನಿಸಿ, ಅಪಘಾತಕ್ಕೀಡಾದ ವಾಹನವನ್ನು ರಸ್ತೆಯ ಪಕ್ಕಕ್ಕೆ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಲಕಟ್ಟಾ ಗ್ರಾಮದ ಮುಖ್ಯ ರಸ್ತೆಯ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಮನೆ ಬಳಕೆಯ ಖಾಲಿ ಗ್ಯಾಸ್ ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ KA-28-8176 ನೋಂದಣಿ ಸಂಖ್ಯೆಯ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿಬಿದ್ದಿದೆ. ಪರಿಣಾಮವಾಗಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕಳುಹಿಸಲಾಯಿತು.
ಘಟನೆಯ ಕುರಿತು ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ಹಳಿಯಾಳ ERSS 112 ವಾಹನದ ರೂಟ್ ನಂ. 11ರ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ರಸ್ತೆಯಲ್ಲಿ ಬಿದ್ದಿದ್ದ ವಾಹನವನ್ನು ಪಕ್ಕಕ್ಕೆ ಸರಿಸಿ, ಇತರ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ವ್ಯವಸ್ಥೆ ಮಾಡಿದರು.
ತುರ್ತು ಕರೆಗೆ ತಕ್ಷಣ ಸ್ಪಂದಿಸಿ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸುವುದರ ಜೊತೆಗೆ ಸಂಚಾರ ಸುಗಮಗೊಳಿಸಿದ ಎ.ಎಸ್.ಐ. ಪ್ರಕಾಶ ಮೂಳೆ ಹಾಗೂ ವಾಹನ ಚಾಲಕ ಎ.ಆರ್.ಎಸ್.ಐ. ಶ್ರೀಕಾಂತ ಲಮಾಣಿ ಅವರ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
