ಬೇಡ್ತಿ–ವರದಾ ನದಿ ಜೋಡಣೆ ವಿಚಾರದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರ ದ್ವಂದ್ವ ನಿಲುವಿಗೆ ಅನಂತಮೂರ್ತಿ ಹೆಗಡೆ ಪ್ರಶ್ನೆ
ಶಿರಸಿ: ಬೇಡ್ತಿ–ವರದಾ ನದಿ ಜೋಡಣೆ ಯೋಜನೆಗೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿ, ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಪ್ರಕ್ರಿಯೆಗೆ ಮುಂದಾಗಿರುವುದರ ಕುರಿತು ಜಿಲ್ಲೆಯ ಕಾಂಗ್ರೆಸ್ ಶಾಸಕರು ಮೌನ ವಹಿಸಿರುವುದೇಕೆ? ಸಾರ್ವಜನಿಕ ವೇದಿಕೆಗಳಲ್ಲಿ ಯೋಜನೆಯನ್ನು ವಿರೋಧಿಸುವ ಶಾಸಕರು ಸರ್ಕಾರದ ಮಟ್ಟದಲ್ಲಿ ಅದೇ ಗಟ್ಟಿತನವನ್ನು ತೋರಿಸದಿರುವುದು ದ್ವಂದ್ವ ನೀತಿಯಲ್ಲವೇ ಎಂದು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಶಿರಸಿಯಲ್ಲಿ ನಡೆದ ಬೃಹತ್ ಸಮಾವೇಶ ಹಾಗೂ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ನದಿ ತಿರುವು ಯೋಜನೆ ವಿರೋಧಿ ಪ್ರತಿಭಟನೆಯಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕರು ಯೋಜನೆಯನ್ನು ಕೈಬಿಡುವಂತೆ ಗಟ್ಟಿಯಾಗಿ ಆಗ್ರಹಿಸಿದ್ದರು. ಅವರ ವಿರೋಧ ಸ್ವಾಗತಾರ್ಹ. ಆದರೆ, ಜನರ ಹಿತಾಸಕ್ತಿಯ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ವ್ಯಕ್ತವಾಗುವ ಕಾಳಜಿ ಮುಖ್ಯಮಂತ್ರಿ ಎದುರು ಯಾಕೆ ಕಾಣಿಸುತ್ತಿಲ್ಲ ಎಂಬುದು ಜನರ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಸಂಸದರು ಹಾಗೂ ಶಾಸಕರು ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ನದಿ ತಿರುವು ಯೋಜನೆಯನ್ನು ಜಾರಿಗೊಳಿಸದಂತೆ ಮನವಿ ಸಲ್ಲಿಸಿ, ಅದರ ಸಾಧಕ-ಬಾಧಕಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ. ಆದರೂ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ, ಬೇಡ್ತಿ–ವರದಾ ನದಿ ಜೋಡಣೆ ಯೋಜನೆಗೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವುದಾಗಿ ತಿಳಿಸಿ, ಡಿಪಿಆರ್ ಸಿದ್ಧಪಡಿಸುವಂತೆ ಒತ್ತಾಯಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಈ ನಿಲುವಿನ ಕುರಿತು ಜಿಲ್ಲೆಯ ಕಾಂಗ್ರೆಸ್ ಶಾಸಕರು ಇದುವರೆಗೆ ಬಹಿರಂಗವಾಗಿ ತಮ್ಮ ಆಕ್ಷೇಪ ವ್ಯಕ್ತಪಡಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜನರ ಮುಂದೆ ಯೋಜನೆಯನ್ನು ವಿರೋಧಿಸುವವರು ಸರ್ಕಾರದ ಮಟ್ಟದಲ್ಲಿಯೂ ಅದೇ ದೃಢ ನಿಲುವು ಪ್ರದರ್ಶಿಸಬೇಕು. ವೇದಿಕೆಯ ಮೇಲೆ ಒಂದು ಮಾತು, ಸರ್ಕಾರದ ಎದುರು ಮತ್ತೊಂದು ನಿಲುವು ಅನುಸರಿಸುವುದು ಜನರ ವಿಶ್ವಾಸಕ್ಕೆ ಧಕ್ಕೆ ತರುವ ಸಂಗತಿಯಾಗಿದೆ ಎಂದು ಟೀಕಿಸಿದ್ದಾರೆ.
ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಮುಖ್ಯಮಂತ್ರಿಗಳ ಬಳಿ ಕೊಂಡೊಯ್ದು ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲದ ಕಾರಣಕ್ಕೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ, ಜಿಲ್ಲೆಯ ಜನರ ಬದುಕು, ಪರಿಸರ ಹಾಗೂ ನದಿ ಕಣಿವೆಯ ಹಿತಾಸಕ್ತಿಗೆ ಧಕ್ಕೆಯಾಗುವ ಸಾಧ್ಯತೆಯಿರುವ ಯೋಜನೆಗಳ ವಿರುದ್ಧ ಶಾಸಕರು ಧೈರ್ಯವಾಗಿ ಧ್ವನಿ ಎತ್ತಬೇಕು. ಯಾವುದೇ ಕಾರಣಕ್ಕೂ ನದಿ ಜೋಡಣೆ ಯೋಜನೆಯ ಡಿಪಿಆರ್ ಸಿದ್ಧತೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯ ಕಾಂಗ್ರೆಸ್ ಶಾಸಕರು ಇನ್ನಾದರೂ ಮೌನ ಮತ್ತು ದ್ವಂದ್ವ ನಿಲುವನ್ನು ಬದಿಗಿಟ್ಟು, ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ವಿರುದ್ಧ ಸರ್ಕಾರದ ಮಟ್ಟದಲ್ಲಿ ಪ್ರಬಲವಾಗಿ ಧ್ವನಿ ಎತ್ತಬೇಕು. ಜನರ ಆತಂಕವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಯೋಜನೆಯ ಮುಂದಿನ ಪ್ರಕ್ರಿಯೆ ಸ್ಥಗಿತಗೊಳ್ಳುವಂತೆ ಒತ್ತಡ ಹೇರಬೇಕು ಎಂದು ಅನಂತಮೂರ್ತಿ ಹೆಗಡೆ ಒತ್ತಾಯಿಸಿದ್ದಾರೆ.
